ಯಸಳೂರು: ತಾಲ್ಲೂಕಿನ ಯಸಳೂರು ಹೋಬಳಿ ಬೆಳೆಗಾರರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರೈತ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದ ಸ್ಥಳದಲ್ಲೇ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದು ವಿಶೇಷವಾಗಿತ್ತು.

ಯಸಳೂರು ಹೋಬಳಿ ಬೆಳೆಗಾರರ ಸಂಘದ ಕರೆಯ ಮೇರೆಗೆ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಾರರ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಎಚ್‌.ಡಿ.ಪಿ ಮತ್ತು ಕೆ.ಜಿ.ಎಫ್ ಸಂಘಗಳ ನಿರ್ದೇಶಕರು ಹಾಗೂ ಪದಾಧಿಕಾರಿಗಳು, ಮಾಜಿ ಸೈನಿಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರು, ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಹಾಗೂ ಸಿಬ್ಬಂದಿ, ಮಹಿಳಾ ಸಂಘಗಳ ಸದಸ್ಯರು, ರೈತರು ಮತ್ತು ಯಸಳೂರು ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರೈತ ಭವನ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಳೆಗಾರರ ಒಗ್ಗಟ್ಟು ಮತ್ತು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಮಾಡದಂತೆ ಮನವಿಕಾರ್ಯಕ್ರಮದ ಬಳಿಕ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಗಂಗಾಧರ್ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಬೆಳೆಗಾರರು ಯಸಳೂರು ವಲಯ ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ರೈತ ಭವನ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದ ಕುರಿತು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗಂಗಾಧರ್, “ಯಸಳೂರು ವ್ಯಾಪ್ತಿಯ ಸರ್ವೆ ನಂಬರ್ 125ರಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ರೈತ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸುಮಾರು 10 ಗುಂಟೆ ಜಾಗವನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಈಗಾಗಲೇ ರೈತ ಭವನ ನಿರ್ಮಾಣಕ್ಕೆ ಶಾಸಕರು ಹಾಗೂ ಎಲ್ಲ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆಗಳು ಸಹಕರಿಸಬೇಕು” ಎಂದು ಮನವಿ ಮಾಡಿದರು.

“ರೈತ ಭವನ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದ ಕುರಿತು ತಾಲೂಕು ಮಟ್ಟದ ಸರ್ವೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ನಡೆಸಲಾಗಿದೆ. ಸರ್ವೆ ವೇಳೆ ಜಾಗವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರದೆ ಕಂದಾಯ ಇಲಾಖೆಗೆ ಒಳಪಡುತ್ತದೆ ಎಂಬುದು ತಿಳಿದುಬಂದಿದೆ. ಈ ಕುರಿತು ಸರ್ವೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆದ್ದರಿಂದ ರೈತ ಭವನ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಮಂಜೂರು ಮಾಡುವ ಪ್ರಕ್ರಿಯೆಗೆ ಸಹಕರಿಸಬೇಕು” ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಯಸಳೂರು ವಲಯ ಅರಣ್ಯಾಧಿಕಾರಿ ರವೀಂದ್ರ ಸಿದ್ದಯ್ಯ ಹಿರೇಮಠ, “ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ರೈತ ಭವನ ನಿರ್ಮಿಸುತ್ತಿದ್ದು, ಜಾಗವು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದರೆ ನಮ್ಮ ಇಲಾಖೆಯಿಂದ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ನಿಯಮಾನುಸಾರ ಕಟ್ಟಡ ನಿರ್ಮಿಸಿಕೊಳ್ಳಲು ನಮ್ಮ ಅಭ್ಯಂತರವಿಲ್ಲ” ಎಂದು ತಿಳಿಸಿದರು.

ರೈತ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ತೊಂದರೆ ಅಥವಾ ಆಕ್ಷೇಪಣೆ ಎದುರಾಗದಂತೆ ಸಹಕರಿಸುವಂತೆ ಯಸಳೂರು ಹೋಬಳಿ ಬೆಳೆಗಾರರ ಸಂಘದ ವತಿಯಿಂದ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಯಸಳೂರು ಹೋಬಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಾಜಿ ಸೈನಿಕರು, ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹಿಳಾ ಸಂಘಗಳ ಸದಸ್ಯರು, ರೈತರು ಹಾಗೂ ಯಸಳೂರು ಗ್ರಾಮಸ್ಥರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed