ಸಕಲೇಶಪುರ : ಕಲಾವಿದರ ಸಂಘವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಹೇಳಿದರು.ಪಟ್ಟಣದ ಮೈತ್ರಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಗೌರವ ಮತ್ತು ಮನ್ನಣೆ ದೊರೆಯಬೇಕು. ವಿಶೇಷವಾಗಿ ನೈಜ ಪ್ರತಿಭೆ ಹಾಗೂ ಕಲಾಸೇವೆಗೆ ಆದ್ಯತೆ ನೀಡುವ ಮೂಲಕ ನಿಜವಾದ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು. ಕಲಾವಿದರು ತಮ್ಮ ವೃತ್ತಿಯಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತರಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಸಕಲೇಶಪುರದಂತಹ ಸಣ್ಣ ತಾಲೂಕಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕಲಾವಿದರು ಇರುವುದು ಸಂತಸದ ಸಂಗತಿ. ಸಂಗೀತ ಮತ್ತು ವಾದ್ಯಗೋಷ್ಠಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರನ್ನು ಪ್ರೋತ್ಸಾಹಿಸುವುದರ ಜತೆಗೆ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಕಲಾವಿದರ ನಡುವೆ ಪರಸ್ಪರ ಸಹಕಾರ, ಪ್ರೀತಿ ಮತ್ತು ಒಗ್ಗಟ್ಟು ಬೆಳೆದಾಗ ಸಂಘಟನೆಯ ಉದ್ದೇಶ ಈಡೇರಲು ಸಾಧ್ಯವಾಗುತ್ತದೆ ಎಂದರು.

ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಹಿರಿಯ ಕಲಾವಿದರನ್ನು ಸ್ಮರಿಸುವುದು ಹಾಗೂ ಅಗಲಿದ ಕಲಾವಿದರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಲಾವಿದರ ಸೇವೆ ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವೂ ನಡೆಯಬೇಕು ಎಂದು ಹೇಳಿದರು.

ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ಇದೀಗ ಇತರರಿಗೂ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶ ಹೊಂದಿದ್ದೇನೆ. ಸಂಘಟನೆಯಲ್ಲಿ ಎಲ್ಲರನ್ನೂ ಮೆಚ್ಚಿಸುವುದು ಕಷ್ಟದ ಕೆಲಸವಾದರೂ, ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಸಂಘದ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ಎಚ್ಚರಿಕೆ ವಹಿಸಲಾಗಿದೆ.ಕಡಿಮೆ ಖರ್ಚಿನಲ್ಲಿ, ಅಲ್ಪ ಪ್ರಮಾಣದ ದೇಣಿಗೆ ಸಂಗ್ರಹಿಸುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರಯತ್ನಿಸಿದ್ದೇವೆ.ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಲಾವಿದರನ್ನು ಒಗ್ಗೂಡಿಸಿ, ಅವರ ಹಿತಾಸಕ್ತಿಗೆ ಪೂರಕವಾದ ಚಟುವಟಿಕೆಗಳನ್ನು ಮುಂದೆ ಬರುವ ಪದಾಧಿಕಾರಿಗಳು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಎಸ್ ಜಾನಕಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎಸ್. ಜಾನಕಿರವರು ಹಾಡಿರುವ ಹೆಸರಾಂತ ಹಾಡುಗಳನ್ನು ಹಾಡುವ ಮುಖಾಂತರ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಅಂತಿಮವಾಗಿ ಗಣ್ಯರ ಜೊತೆಗೆ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಸಮಾಜ ಸೇವಕ ನಾರಾಯಣ ಆಳ್ವ, ಉದ್ಯಮಿಗಳಾದ ಮೆಣಸು ಸತ್ಯಣ್ಣ, ಅಡಿಕೆ ವೆಂಕಟೇಶ್, ಜಾಬೀರ್, ಪತ್ರಕರ್ತರಾದ ಜೈ ಭೀಮ್ ಮಂಜು, ಸುಧೀರ್, ಸಾ. ಸು ವಿಶ್ವನಾಥ್, ಜೆಡಿಎಸ್ ಮುಖಂಡ ಸೂರಿ,ವೈದ್ಯ ಅರ್ಜುನ್,ಕಲಾವಿದರ ಸಂಘದ ಕಾರ್ಯದರ್ಶಿ ಯೋಗೇಶ್, ಪದಾಧಿಕಾರಿಗಳಾದ ರೇವಣ್ಣ, ವರದರಾಜ್, ರಮೇಶ್ ರಾವ್, ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *