
ಹಾಸನ: ನಗರದ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಹಾಗೂ ಕರ್ನಾಟಕ ಅಂಧರ ಒಕ್ಕೂಟದ ವತಿಯಿಂದ ನವೆಂಬರ್ 14, 2026ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಬಾಳ್ಳು ಗೋಪಾಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷರಾದ ಬಿ.ಕೆ. ಮಂಜುನಾಥ್ ಅವರು, ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಉತ್ತಮ ಆಡಳಿತಗಾರರಾಗಿದ್ದರು. ಮಕ್ಕಳ ಮೇಲಿನ ಅಪಾರ ಪ್ರೀತಿ ಮತ್ತು ಕಾಳಜಿಯಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯು ನಡೆದು ಬಂದ ಹಾದಿಯನ್ನು ವಿವರಿಸಿದ ಅವರು, ಅಂಧ ಮಕ್ಕಳ ಅನುಕೂಲಕ್ಕಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ದಾನಿಗಳು ಹೆಚ್ಚಿನ ರೀತಿಯಲ್ಲಿ ಸಹಾಯ ಮತ್ತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಂಧ ಮಕ್ಕಳ ಸೇವೆಗೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಖಂಡರಾದ ಮರ್ಕುಲಿ ಗೋಪಾಲ್, ಪತ್ರಕರ್ತರಾದ ವೆಂಕಟೇಶ್, ದರ್ಪಣ ಗೋಪಾಲ್, ವೀರಶೈವ ಲಿಂಗಾಯತ ಮಹಾಸಭಾದ ಹಾಸನ ತಾಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಸಮಿತಿಯ ಡಾ. ಶೃತಿ, ಡಾ. ಅಕ್ಕಮಹಾದೇವಿ, ಸ್ಕೈ ಇಂಟರ್‌ನ್ಯಾಷನಲ್ ಶಾಲೆಯ ಸ್ನೇಹ ಸತೀಶ್, ಪ್ರಜ್ವಲ್, ಶಿರೀನಾ, ಯತೀಶ್, ಮಹಾಲಕ್ಷ್ಮಿ ಹಾಗೂ ಎಂ. ಕೃಷ್ಣ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎಲ್. ಗುರುಸ್ವಾಮಿ, ಸುಜೀತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಸನದ ಸ್ಕೈ ಇಂಟರ್‌ನ್ಯಾಷನಲ್ ಶಾಲೆಯ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ಮಕ್ಕಳಿಗೆ ಸಿಹಿ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.



