ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮದಲ್ಲಿ ಶ್ರೀ ರಾಮಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಅದ್ದೂರಿಯಾಗಿ ನಡೆಯಿತು. ಜಾತ್ರೆಯಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಜಾತ್ರಾ ಮಹೋತ್ಸವದ ವಿಶೇಷವೆಂದರೆ ಇದು ಸಕಲೇಶಪುರ ತಾಲ್ಲೂಕಿನ ಪ್ರಥಮ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ, ಈ ಜಾತ್ರೆಯನ್ನು ಹಿಂದಿನ ಕಾಲದಿಂದಲೂ ಸ್ಥಳೀಯರು ‘ಏಲಕ್ಕಿ ಜಾತ್ರೆ’ ಎಂದು ಕರೆಯುತ್ತಾ ಬಂದಿದ್ದಾರೆ.ಇಲ್ಲಿನ ಶ್ರೀ ರಾಮಾಂಜನೇಯ ಸ್ವಾಮಿಯ ಮತ್ತೊಂದು ವಿಶೇಷತೆ ಎಂದರೆ ಕುದುರೆಯ ಮೇಲೆ ಆಸೀನರಾಗಿರುವ ಶ್ರೀರಾಮನ ಪ್ರತಿಮೆ. ಈ ರೀತಿಯ ಪ್ರತಿಮೆ ಅಪರೂಪವಾಗಿದ್ದು, ಇದಕ್ಕೆ ವಿಶಿಷ್ಟವಾದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ ಎಂದು ಗ್ರಾಮದ ಹಿರಿಯರು ಹಾಗೂ ಮುಖಂಡರು ವಿವರಿಸುತ್ತಾರೆ.

ಪೌರಾಣಿಕ ಐತಿಹ್ಯದ ಪ್ರಕಾರ, ಲಂಕೆಯಲ್ಲಿ ರಾವಣನ ಸಂಹಾರ ಮಾಡಿದ ನಂತರ ಶ್ರೀ ರಾಮರು ಅಯೋಧ್ಯಾ ನಗರಕ್ಕೆ ಹಿಂತಿರುಗಿ ಬರುವ ಸಂದರ್ಭದಲ್ಲಿ ಶ್ರೀರಾಮರು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಪ್ರದೇಶವನ್ನು ದಾಟಿ ಸಾಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಕುದುರೆಯ ಮೇಲೆ ಕರೆದೊಯ್ದಿದ್ದರು.

ಈ ಪ್ರಯಾಣದ ವೇಳೆ ಹೊಂಗಡಹಳ್ಳ ಗ್ರಾಮದಲ್ಲಿ ತಂಗಿದ್ದ ಶ್ರೀರಾಮರು ಪ್ರೀತಿಯ ತಮ್ಮ ಲಕ್ಷ್ಮಣರು ಬರುವವರೆಗೂ ಅಲ್ಲಿಯೇ ಉಳಿದಿದ್ದರು ಎನ್ನಲಾಗುತ್ತದೆ. ಬಳಿಕ ಜಾಗಟೆ ಗ್ರಾಮದ ಜನರು ಲಕ್ಷ್ಮಣರನ್ನು ಶ್ರೀರಾಮರ ಬಳಿಗೆ ಕರೆತಂದರು ಎಂಬ ಪ್ರತೀತಿ ಗ್ರಾಮದಲ್ಲಿ ಇಂದಿಗೂ ಪ್ರಚಲಿತದಲ್ಲಿದೆ.

ಈ ಐತಿಹಾಸಿಕ ಐತಿಹ್ಯದ ಸ್ಮರಣಾರ್ಥವಾಗಿ ಪ್ರತಿವರ್ಷ ಹೊಂಗಡಹಳ್ಳದಲ್ಲಿ ಶ್ರೀ ರಾಮಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವನ್ನು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.

ಧಾರ್ಮಿಕ ಶ್ರದ್ಧೆ, ಐತಿಹಾಸಿಕ ಹಿನ್ನೆಲೆ ಹಾಗೂ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನವಾಗಿರುವ ಈ ಜಾತ್ರೆಯು ಹೊಂಗಡಹಳ್ಳ ಗ್ರಾಮದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಸಾರುವ ಪ್ರಮುಖ ಉತ್ಸವವಾಗಿ ಗಮನ ಸೆಳೆಯುತ್ತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *