
ಹಾಸನ: ಬಾಳೆಹೊನ್ನೂರು ಜಗದ್ಗುರು ಶ್ರೀ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಡಿಸೆಂಬರ್ 2ರ ಬುಧವಾರ ಹಾಸನದಲ್ಲಿ ಜನಜಾಗೃತಿ ಧರ್ಮ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 14ರಂದು ತಣ್ಣೀರುಹಳ್ಳ ಮಠದಲ್ಲಿ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ಹಾಗೂ ಸಿದ್ಧತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಗಳ ಭವ್ಯ ಮೆರವಣಿಗೆ
ಡಿಸೆಂಬರ್ 2ರಂದು ಬೆಳಿಗ್ಗೆ 8.30ಕ್ಕೆ ಹಾಸನದ ಬಸವೇಶ್ವರ ದೇವಾಲಯ, ಅರಳೆಪೇಟೆಯಿಂದ ಪೂಜ್ಯ ಶ್ರೀಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕಲಾಭವನದವರೆಗೆ ಗೌರವಪೂರ್ವಕವಾಗಿ ಭಕ್ತಿಭಾವದಿಂದ ಕರೆತರಲಾಗುವುದು.
ಮೆರವಣಿಗೆಯಲ್ಲಿ 108 ಕುಂಭಕಳಶಗಳು, ನಾದಸ್ವರ, ನಂದಿಧ್ವಜ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಸಹಾದ್ರಿ ರಸ್ತೆ ಮುಂಭಾಗದಿಂದ ಸಾಗುವ ಮೆರವಣಿಗೆ ಕಲಾಭವನ ತಲುಪಲಿದೆ. ನಂತರ ಬೆಳಿಗ್ಗೆ 10.30ಕ್ಕೆ ಹಾಸನದ ಕಲಾಭವನದ ಮುಂಭಾಗದಲ್ಲಿ ನಿರ್ಮಿಸಲಾಗುವ ಭವ್ಯ ವೇದಿಕೆಯಲ್ಲಿ ಧರ್ಮ ಸಮಾರಂಭ ನಡೆಯಲಿದೆ.
ಧಾರ್ಮಿಕ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶಪ್ರಸ್ತುತ ಕಾಲಘಟ್ಟದಲ್ಲಿ ಧಾರ್ಮಿಕ ವಿಚಾರಗಳ ಅರಿವು, ಆಧ್ಯಾತ್ಮಿಕ ಚಿಂತನೆ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಧರ್ಮದ ಮಹತ್ವವನ್ನು ಜನರಿಗೆ ತಿಳಿಸುವುದು ಈ ಸಮಾರಂಭದ ಪ್ರಮುಖ ಉದ್ದೇಶವಾಗಿದೆ.
ಮನುಕುಲದ ಒಳಿತಿಗೆ ಅಗತ್ಯವಾದ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ.
ಈ ಕಾರ್ಯಕ್ರಮಕ್ಕೆ ನಾಡಿನ ಎಲ್ಲಾ ಹರ, ಗುರು, ಚರಮೂರ್ತಿಗಳ ಸಾನಿಧ್ಯವನ್ನು ಬಯಸಲು ಸಭೆಯಲ್ಲಿ ಚರ್ಚಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಗಣ್ಯರ ಉಪಸ್ಥಿತಿ
ಸಭೆಯಲ್ಲಿ ನುಗ್ಗೆಹಳ್ಳಿ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಮಠದ ಶ್ರೀ ಸದಾಶಿವಾಚಾರ್ಯ ಸ್ವಾಮೀಜಿ ಹಾಗೂ ಯಸಳೂರು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಐಸಾಮಿಗೌಡ್ರು, ಕಟ್ಟಾಯ ಶಿವಕುಮಾರ್, ಪುನೀತ್ ಪಟೇಲ್, ಹೆಚ್.ವಿ. ಹೇಮಂತ್ ಕುಮಾರ್, ಬಿ.ಎಂ. ಭುವನಾಕ್ಷ, ಈ.ಎಂ. ರುದ್ರಕುಮಾರ್, ಶೋಭನ್ ಬಾಬು, ರೇಣುಕಾ ಪ್ರಸಾದ್, ಟೀಕರಾಜು, ಮಲ್ಲಪ್ಪ ದೊಡ್ಡೇಗೌಡರು, ಶಾಂತರಾಜು, ಶಾಂತಪ್ಪ, ರಾಜಶೇಖರ್ ಮೂರ್ತಿ, ಕುಮಾರಸ್ವಾಮಿ, ಮದನ್, ನವೀನ್, ರೇಣುಕಯ್ಯ, ದೇವರಾಜ್ ಶಾಸ್ತ್ರಿ, ಪಾಲಾಕ್ಷ, ನಂದೀಶ್, ತೋಟಪ್ಪ, ಮಂಜುನಾಥ್, ಯು.ಎಸ್. ಬಸವರಾಜ್, ಕೀರ್ತಿಕುಮಾರ್, ಹೆಚ್. ಮಲ್ಲಿಕಾರ್ಜುನ, ಬಿ.ಕೆ. ಚಂದ್ರಕಲಾ, ಚಂದ್ರಮತಿ, ಮಮತಾ ಪಾಟೀಲ್, ಜಯಶೀಲಮ್ಮ, ಶಶಿಕಲಾ, ಶೋಭಾ ಮಹೇಶ್, ನಗರತ್ನ ಯೋಗೀಶ್, ಗೀತಾ ಪುಟ್ಟಸ್ವಾಮಿ, ಲೀಲಾ ಧರ್ಮಪ್ಪ, ಸಾವಿತ್ರಿ ವಿಜಯಕುಮಾರ್, ವಿಧಾನಲಕ್ಷ್ಮಿ, ಅನಿತಾ, ಸುಲೋಚನಾ, ಇಂದ್ರಮ್ಮ, ಸವಿತಾ, ಭಾಮಿನಿ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
ಸರ್ವ ಸಮಾಜದವರಿಗೆ ಆಹ್ವಾನ
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ಭಕ್ತಾದಿಗಳು, ವಿವಿಧ ಸಮಾಜಗಳ ಬಾಂಧವರು ಹಾಗೂ ನಾಡಿನ ಸಮಸ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಜನಜಾಗೃತಿ ಧರ್ಮ ಸಮಾರಂಭವನ್ನು ಅತ್ಯಂತ ವಿಜೃಂಭಣೆ ಹಾಗೂ ಯಶಸ್ವಿಯಾಗಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.



