
ಸಕಲೇಶಪುರ : ಮಳೆಗಾಲ ಬಂತೆಂದರೆ ಮಲೆನಾಡಿನ ರಸ್ತೆಗಳು ಕೆಸರುಮಯವಾಗುವುದು ಸಹಜ ಆದರೆ ನಿರ್ಮಾಣ ಮಾಡಿದ ರಸ್ತೆ ಕಳಪೆಯಿಂದ ಕೂಡಿದ್ದರ ಪರಿಣಾಮ ಕೆಸರುಗದ್ದೆಯಂತೆ ಆಗಿರುವ ರಸ್ತೆಯಲ್ಲಿಯೇ ಸಾರ್ವಜನಿಕರು ವಿದ್ಯಾರ್ಥಿಗಳು ತಿರುಗಾಡುವ ಪರಿಸ್ಥಿತಿ ಎದುರಾಗಿದೆ .
ತಾಲೂಕಿನ ಹಾಲೆಬೇಲೂರು ಹಾಗೂ ಕಬ್ಬಿನ ಗದ್ದೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲ ಪ್ರಾರಂಭವಾಗಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ.
ಸಕಲೇಶಪುರದಿಂದ ಹಾಲೆಬೇಲೂರು ಮಾರ್ಗವಾಗಿ ಬಾಳ್ಳುಪೇಟೆಗೆ ಸಂಪರ್ಕಿಸುವ ಒಂಬತ್ತು ಕಿಲೋಮೀಟರ್ ರಸ್ತೆ ಇದಾಗಿದ್ದು ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೀಘ್ರವಾಗಿ ರಸ್ತೆಯನ್ನು ದುರಸ್ತಿಪಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಜಾನಕೆರೆ ಲೋಕೇಶ್ ಎಚ್ಚರಿಸಿದ್ದಾರೆ.






