
ಬೇಲೂರು.ತಾಲ್ಲೂಕಿನ ಅರೇಹಳ್ಳಿಯ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಬಿಜೆಪಿಯ ಪಾಲಾಗುವುದರೊಂದಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭಾವಿಸಿದವರಿಗೆ ತೀವ್ರ ಮುಖಭಂಗವಾಗಿದೆ.
ಅಧಿಕಾರದ ಗದ್ದುಗೆಯೇರಿದ ಸಂಭ್ರಮವನ್ನಾಚರಿಸಿ ಮಾತನಾಡಿದ ಬಿಜೆಪಿ ಸದಸ್ಯ ನಾಗೇಶ್ ಶೆಟ್ಟಿ, ಲಿಂಗಾಪುರದ ಸಂಕಪ್ಪರವರು 13 ಮತ ಪಡೆದು ಅಧ್ಯಕ್ಷರಾಗಿಯೂ ಹಾಗೂ ಹೊಸಪೇಟೆ ಬೀದಿಯ ವಿಘ್ನೇಶ್ ರವರು 12 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಯಾವುದೇ ಆಸೆ ಆಮಿಷಕ್ಕೊಳಗಾಗದೆ ಜನಾನುರಾಗಿಯಾಗಿ ಎಲ್ಲರನ್ನೂ ಸಮಾನವಾಗಿ ಕಂಡು ದೀನ ದಲಿತರ ಉದ್ಧಾರಕ್ಕಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಜಿ.ಪಂ.ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ಇನ್ನುಳಿದ ಮೂವತ್ತು ತಿಂಗಳ ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾ.ಪಂ.ಯಲ್ಲಿ ಅಧಿಕಾರವನ್ನು ಹಿಡಿಯಲಿದ್ದಾರೆ. 22 ಸದಸ್ಯರನ್ನು ಹೊಂದಿರುವ ಅತೀ ದೊಡ್ಡ ಪಂಚಾಯಿತಿ ಇದಾಗಿರುವುದರಿಂದ ಜನಪರ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಪಂಚಾಯಿತಿಯ ಅಭ್ಯುದಯಕ್ಕೆ ದೊಡ್ಡ ಕೊಡುಗೆಯನ್ನು ನೀಡಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಮಹೇಶ್ ಶೆಟ್ಟಿ, ಚಂದ್ರಣ್ಣ, ಮಂಜುನಾಥ, ಸಚಿನ್ ರೈ, ಸ್ವಾಮಿ, ಭರತ್, ದಿನೇಶ್, ಪುನೀತ್, ಪ್ರಕಾಶ್, ಮಾಧುರಿ ಬಿ., ಶಶಿ ಪ್ರಭಾಕರ್, ಅಮಿತ್ ಸಂಕಪ್ಪ, ಪದ್ಮ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


