ಸಕಲೇಶಪುರ :- ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯ ವೈದ್ಯರೊಬ್ಬರಿಗೆ 11 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ.

ಗರ್ಭಿಣಿಯ ಸಾವಿಗೆ ಕಾರಣವಾದ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುರುಷೋತ್ತಮ್ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ 11 ಲಕ್ಷ ರೂ. ದಂಡ ವಿಧಿಸಿದೆ.

ಘಟನೆಯ ವಿವರ :-ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಗ್ರಾಮದ ನಿವಾಸಿ ಹೆಚ್.ಎಂ.ಮೋಹನ್ ಕುಮಾರ್ ಅವರು ತಮ್ಮ ಪತ್ನಿಯಾದ ವಿ.ಎಂ.ಆಶಾ ಅವರ ಹೆರಿಗೆ ಪೂರ್ವ ತಪಾಸಣೆಗಾಗಿ ಸಕಲೇಶಪುರ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ 2021 ಮಾರ್ಚ್ 26 ರಂದು ಬೆಳಿಗ್ಗೆ 11 ಗಂಟೆಗೆ ತಪಾಸಣೆಗೆ ಹೋದ ವೇಳೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುರುಷೋತ್ತಮ ಅವರು ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಡಾ.ಪುರುಷೋತ್ತಮ ಅವರು ತಪಾಸಣೆಯಲ್ಲಿ ಆಶಾ ಅವರನ್ನು ಪರೀಕ್ಷಿಸಿ, ಸ್ಕ್ಯಾನ್ ವರದಿಯ ಅನ್ವಯ ಮಗು ಹೊಟ್ಟೆಯಲ್ಲೇ ಮರಣ ಹೊಂದಿದೆ ಎಂದು ತಿಳಿಸಿದ್ದಾರೆ. ತಕ್ಷಣವೇ ಪತಿ ಮೋಹನ್ ಕುಮಾರ್ ಅವರು ತಮ್ಮ ಪತ್ನಿಯ ಆರೋಗ್ಯದ ದೃಷ್ಟಿಯಿಂದ ಗರ್ಭಪಾತ ಶಸ್ತ ಚಿಕಿತ್ಸೆ ಮಾಡುವಂತೆ ವೈದ್ಯರಲ್ಲಿ ಮನವಿಮಾಡಿಕೊಂಡರೂ ಸಹಿತ , ಡಾ.ಪುರುಷೋತ್ತಮ ಅವರು ಮೋಹನ್ ಕುಮಾರ್ ಅವರ ಕೋರಿಕೆಯನ್ನು ತಿರಸ್ಕರಿಸಿ, ಶಸ್ತ್ರ ಚಿಕಿತ್ಸೆಯನ್ನು ಮಾಡದೇ ಒಂದು ಇಂಜೆಕ್ಷನ್ ನೀಡಿದ್ದಾರೆ.

ಅದೇ ದಿನ ರಾತ್ರಿ ಆಶಾ ಅವರು ತೀವ್ರ ಹೊಟ್ಟೆ ನೋವಿನಿಂದ ನರಳಾಡಿ, ಮೂರ್ಛೆಯ ಸ್ಥಿತಿಗೆ ಹೋಗಿದ್ದಾರೆ. ಡಾ.ಪುರುಷೋತ್ತಮ ಮರುದಿನ ಬೆಳಗ್ಗೆ ಬಂದು ಆಶಾ ಅವರನ್ನು ಪರೀಕ್ಷಿಸಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದು, ಹಿಮ್ಸ್ ನ ಆಸ್ಪತ್ರೆಯಲ್ಲಿ ಆಶಾ ಅವರಿಗೆ ಗರ್ಭಪಾತ ಆಗಿದ್ದು, ಮಾಚ್ 29ರಂದು ಹೆಚ್ಚಿನ ರಕ್ತಸ್ರಾವವಾದ ಕಾರಣ ಮರಣ ಹೊಂದಿದ್ದಾರೆ.

ಇದಕ್ಕೆಲ್ಲಾ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ ಅವರ ವೈದ್ಯಕೀಯ ನಿರ್ಲಕ್ಷ್ಯತನ, ಹಾಗೂ ಸೇವಾನ್ಯೂನತೆ ಕಾರಣದಿಂದ ನನ್ನ ಪತ್ನಿ ಆಶಾ ಮರಣಹೊಂದಿರುವುದಾಗಿ ಆರೋಪಿಸಿ ಪರಿಹಾರಕ್ಕಾಗಿ ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ, ಸಿ.ಸಿ.127/2021ರಡಿ ದೂರನ್ನು 2021 ಮೇ 5 ರಂದು ಸಲ್ಲಿಸಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷರಾದ ಸಿ.ಎಂ.ಚಂಚಲ, ಸದಸ್ಯರಾದ ಹೆಚ್.ವಿ.ಮಹಾದೇವ ಹಾಗು ಮಹಿಳಾ ಸದಸ್ಯರಾದ ಆರ್.ಅನುಪಮ ಇವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ಡಾ.ಪುರುಷೋತ್ತಮ ಅವರ ವೈದ್ಯಕೀಯ ನಿರ್ಲಕ್ಷ್ಯ ದಿಂದ ಸೇವಾನ್ಯೂನತೆ ಉಂಟಾಗಿರುತ್ತದೆ ಎಂದು ತೀರ್ಮಾನಿಸಿ, 10 ಲಕ್ಷ ರೂ. ದೂರು ದಾಖಲಾದ ದಿನಾಂಕದಿಂದ ಸಾಲಿಯಾನ ಶೇ.9 ರಂತೆ ಬಡ್ಡಿ ಸೇರಿಸಿ ಆರು ವಾರಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ಹಾಗೂ ಫಿರ‍್ಯಾದಿನ ಖರ್ಚೆಂದು 1 ಲಕ್ಷ ರೂ. ಒಟ್ಟಾರೆ 11 ಲಕ್ಷ ರೂ. ರೂ. ದೂರುದಾರ ಮೋಹನ್ ಕುಮಾರ್ ಅವರಿಗೆ ನೀಡಬೇಕೆಂದು ಹಾಗೂ 50 ಸಾವಿರ ರೂ. ದಂಡವನ್ನು ವೈದ್ಯಕೀಯ ವರದಿಯಲ್ಲಿ ಕೆಟ್ಟ ಬರವಣಿಗೆಯಲ್ಲಿ ನಮೂದು ಮಾಡಿರುವ ಕಾರಣ ಗ್ರಾಹಕ ಸಂರಕ್ಷಣಾ ನಿಧಿಗೆ ಪಾವತಿಸುವಂತೆ, ತಪ್ಪಿದ್ದಲ್ಲಿ ಒಟ್ಟು ಮೊತ್ತಗಳ ಮೇಲೆ ಸಾಲಿಯಾನ ಶೇಕಡ 10 ಬಡ್ಡಿಯೊಂದಿಗೆ ಡಾ.ಪುರುಷೋತ್ತಮ ಅವರು ಪಾವತಿಸುವಂತೆ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷರಾದ ಸಿ.ಎಂ. ಚಂಚಲ ಅವರು ತೀರ್ಪು ನೀಡಿ ಆದೇಶಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *