
ಅರಸೀಕೆರೆ: ‘ಜೀವ ಉಳಿಸುವುದು ಒಂದು ಪುಣ್ಯದ ಸೇವೆ. ಇಂಥ ಅವಕಾಶ ಸಿಕ್ಕರೆ ಎಲ್ಲರೂ ಸೇವೆ ಮಾಡಿ ಮಾನವೀಯತೆ ಪ್ರದರ್ಶಿಸಬೇಕು’ ಎಂದು ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ಧ ಬಸವ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಂದ್ರಾಳು ಗ್ರಾಮದ ಶರಣ್ ಕುಮಾರ್ ಅವರು ಆಯೋಜಿಸಿದ್ದ ತಾಲ್ಲೂಕಿನ ನಾಗರಿಕರಿಗೆ ಉಚಿತ ಅಂಬುಲೆನ್ಸ್ ಸೇವೆಯ ನಿಮಿತ್ತ ಎರಡು ಅಂಬುಲೆನ್ಸ್ ವಾಹನಗಳಿಗೆ ನಗರದ ಬಸ್ ನಿಲ್ದಾಣದ ಎದುರು ಚಾಲನೆ ನೀಡಿ ಅವರು ಮಾತನಾಡಿದರು.
ಆಂಬುಲೆನ್ಸ್ ವಾಹನ ಒದಗಿಸಿದ ಹಂದ್ರಾಳು ಗ್ರಾಮದ ಶರಣ್ ಕುಮಾರ್ ಮಾನವೀಯತೆಯ ಪ್ರತೀಕ ಎಂದರು.
ನಗರಸಭೆ ಅಧ್ಯಕ್ಷ ಗಿರೀಶ್ ಮಾತನಾಡಿ, ಒಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಉತ್ತಮ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗುವ ಅನಿವಾರ್ಯತೆ ಎದುರಾದಾಗ ಆಂಬುಲೆನ್ಸ್ ಅಗತ್ಯವಾಗಿದೆ. ಶರಣ್ ಕುಮಾರ್ ಸೇವೆ ಎಲ್ಲರಿಗೂ ಮಾದರಿಯಾಗಬೇಕಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹೇಮಂತ್ ಕುಮಾರ್, ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸಯ್ಯದ್ ರಫೀಕ್, ನಗರಸಭೆ ಸದಸ್ಯೆ ಶ್ವೇತಾ ರಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ತಿಮ್ಮರಾಜು, ಮಂಜುನಾಥ್, ಶರಣ್ ಕುಮಾರ್ ಸ್ನೇಹ ಬಳಗದವರು ಇದ್ದರು.
