
ಸಕಲೇಶಪುರ:ತಾಲೂಕಿನ 94ಸಿಯಡಿ ಬಡವರಿಗೆ ಹಕ್ಕಕುಪತ್ರಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಬಿರಡಹಳ್ಳಿ ಗ್ರಾ.ಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾ.ಪಂ ಸಭೆಯನ್ನು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಮಾತನಾಡಿ ಬಿರಡಹಳ್ಳಿ ಗ್ರಾ.ಪಂ ತಾಲೂಕಿನ ಮಾದರಿ ಗ್ರಾ.ಪಂಗಳಲ್ಲಿ ಒಂದಾಗಿದೆ. ಅಧಿಕಾರಿಗಳು ಜನಸಾಮಾನ್ಯರಿಗೆ ಗೌರವಕೊಡಬೇಕು ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ವಿನಾಕಾರಣ ಅಲೆಸಬಾರದು. ಜನಸಾಮಾನ್ಯರಿಗೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಲು ಮುಂದಾಗಬೇಕು. ಯಾರಾದರು ಸರ್ಕಾರಿ ಸಿಬ್ಬಂದಿಗಳ ವಿರುದ್ದ ಜನಸಾಮಾನ್ಯರಿಂದ ದೂರು ಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಆದರೆ ಸುಳ್ಳು ಭರವಸೆಗಳನ್ನು ನಾನು ನೀಡುವುದಿಲ್ಲ ಎಂದರು.
ಬಿರಡಹಳ್ಳಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಾತನಾಡಿ ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೆಲವೆಡೆ ರಸ್ತೆ ಮತ್ತು ಚರಂಡಿಗಳ ಅವಶ್ಯಕತೆಯಿದೆ. ಶಾಸಕರು ಸೇರಿದಂತೆ ಎಲ್ಲಾ ಸದಸ್ಯರುಗಳು ಒಟ್ಟಾಗಿ ಪಂಚಾಯತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳೋಣ ಎಂದರು.
ಸಭೆಯಲ್ಲಿ ಕೆಲವರು 94 ಸಿಯಡಿ ಹಕ್ಕುಪತ್ರಗಳನ್ನು ನೀಡಲು ಅಧಿಕಾರಿಗಳು ಸತಾಯಿಸುತ್ತಾರೆ. ಸಣ್ಣಪುಟ್ಟ ಕಾರಣಗಳನ್ನು ನೆಪವಾಗಿಟ್ಟುಕೊಂಡು ಹಕ್ಕುಪತ್ರಗಳನ್ನು ನೀಡುವುದಿಲ್ಲ. ಇದರಿಂದ ಬಡವರಿಗೆ ತುಂಬಾ ಸಮಸ್ಯೆಯಾಗುತ್ತಿದೆ.ಇನ್ನು ಬಿಪಿಎಲ್ ಕಾರ್ಡುದಾರರ ಅರಿವಿಲ್ಲದಂತೆಯೆ ಎಪಿಎಲ್‌ಗೆ ಬದಲಾವಣೆ ಮಾಡಲಾಗುತ್ತದೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಯಾವ ಮಾನದಂಡದ ಆಧಾರದ ಮೇಲೆ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಮಾರ್ಪಡಾಗುತ್ತದೆ ಎಂಬುದರ ಕುರಿತು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಬೇಕು. ಕಾಡಾನೆ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಶಾಸಕರು ಒತ್ತಾಯಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಚೆಸ್ಕಾಂ ಇಲಾಖೆಗೆ ಬಿರಡಹಳ್ಳಿ ಗ್ರಾಮಕ್ಕೆ ಆರ್.ಸಿ.ಸಿ ವಿದ್ಯುತ್ ಕಂಬ ಹಾಕಿಸಿ ಕೊಡಲು ಮನವಿ, ದೊಡ್ಡ ನಾಗರ ಪಾರೂಕ್ ಅಹಮ್ಮದ್‌ರವರ ಮನೆಯ ಹತ್ತಿರ ದ ಕಂಬಕ್ಕೆ ವಿದ್ಯುತ್ ತಂತಿ ಬದಲಾವಣೆ, ದೊಡ್ಡನಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗವಿರುವ ವಿದ್ಯುತ್ ಲೈನ್ ಬದಲಾವಣೆ, ಸೇರಿದಂತೆ ಇನ್ನು ಹಲವು ಮನವಿಗಳನ್ನು ಸಲ್ಲಿಸಲಾಯಿತು.
ಈ ವೇಳೆ ಬಿರಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಾಡಕಚೇರಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮತ್ತು ಟೋಕನ್ ವಿತರಣೆ ಯಂತ್ರಕ್ಕೆ ಮಾನ್ಯ ಶಾಸಕರು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಮತ್ತು ಶಾಲೆಗಳಿಗೆ ಸಂವಿಧಾನ ಪೀಠಿಕೆಯನ್ನು ಮತ್ತು ಶೇ 25 ರ ವೆಚ್ಚದ ಲಾನು‘ವಿಗಳಿಗೆ ಚೆಕ್ ಮೂಲಕ ಸೌಲಭ್ಯವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕರು (ಗ್ರಾ.ಉ ) ಸಹಾಯಕ ನಿರ್ದೇಶಕ ಆದಿತ್ಯ, ಗ್ರಾ.ಪಂ ಉಪಾಧ್ಯಕ್ಷೆ ಮಧುಮಣಿ, ಸಾ.ನ್ಯಾ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಬೈಕೆರೆ ದೇವರಾಜು, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸವಿವರ, ಸೋಮಶೇಖರ್ ಸೇರಿದಂತೆ ಎಲ್ಲಾ ಗ್ರಾ.ಪಂ ಸದಸ್ಯರುಗಳು, ಪಿಡಿಓ ಗಿರೀಶ್, ವಿವಿಧ ಇಲಾಖೆಯ ಅಧಿಕಾರಿಗಳೂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಸಂಘ ಮತ್ತು ಬೆಳೆಗಾರರ ಸಂಘದ ಪದಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ ವರ್ಗದವರು ಮತ್ತಿತರರು ಭಾಗವಹಿಸಿದ್ದರು.
