
ಹೊಳೆನರಸೀಪುರ: 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2018 ರಲ್ಲಿ ಹಾಸನ ಹೊಳೆನರಸೀಪುರ ರಾಜ್ಯ ಹೆದ್ದಾರಿಯ ಹಂಗರ ಹಳ್ಳಿ ಬಳಿ ನಿರ್ಮಿಸಿದ ರೈಲ್ವೆ ಮೇಲ್ಸೇತುವೆಯು ಕಳಪೆ ಕಾಮಗಾರಿಯಿಂದಾಗಿ ಶಿಥಿಲವಾಗಿ ವಾಹನ ಸವಾರರಿಗೆ ಕಂಟಕವಾದ ಹಿನ್ನೆಲೆಯಲ್ಲಿ, ರೈಲ್ವೆ ಮೇಲ್ಸೇತುವೆಯನ್ನು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಾಲ್ಕು ತಿಂಗಳಲ್ಲಿ ನವೀಕರಣಗೊಳಿಸಲಾಗುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು.
ಹಂಗರ ಹಳ್ಳಿ ಮೇಲ್ಸೇತುವೆಯ ನವೀಕರಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾಧ್ಯಮಗಳೊಂದಿಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಾಸಕರು.
ಈ ಮೇಲ್ಸೇತುವೆಯ ಪಕ್ಕದಲ್ಲಿ ಮತ್ತೊಂದು ಮೇಲ್ಸೇತುವೆಯನ್ನು 60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈಗ ಹಂಗರ ಹಳ್ಳಿಯ ಸುಮಾರು ಅರ್ಧದಷ್ಟು (240 ಮೀಟರ್ ನಷ್ಟು) ಮತ್ತು ಕುಸಿದ ರೈಲ್ವೆ ಮೇಲ್ಸೇತುವೆಯ ನವೀಕರಣ ಕಾಮಗಾರಿಯನ್ನು ಬೆಂಗಳೂರಿನ ಎಂ.ವಿ.ಕನ್ ಸ್ಟ್ರಕ್ಷನ್ ಕಂಪನಿಯ ವೆಂಕಟೇಶ್ ಎಂಬುವರಿಗೆ ನೀಡಲಾಗಿದ್ದು, ಹೊಸದಾಗ ಪಿಲ್ಲರ್ ಗಳನ್ನು ನಿರ್ಮಿಸಿ ನಾಲ್ಕು ತಿಂಗಳ ಒಳಗೆ ಕಾಮಗಾರಿಯನ್ನು ಪೂರೈಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲಲೇ ಕಳೆದ ಮೂರು ತಿಂಗಳಿಂದ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು. ಇನ್ನೂ ನಾಲ್ಕು ತಿಂಗಳುಗಳ ವಾಹನಗಳು ಪಡುವಲಹಿಪ್ಪೆ, ಹನುಮನಹಳ್ಳಿ ಹಂಗರಹಳ್ಳಿ ಮಾರ್ಗವಾಗಿ ಮೈಸೂರು ಮತ್ತು ಹಾಸನವನ್ನು ತಲುಪಬೇಕು.
ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವಂತಾಗಿ ವಾಹನ ಸವಾರರ ಸಮಯ ಮತ್ತು ಇಂಧನವು ನೀರಿನಲ್ಲಿ ಹೋಮ ಮಾಡಿದಂತಾಗಿರುವುದು ವಿಪರ್ಯಾಸವಲ್ಲದೇ ಮತ್ತೇನು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವುದು ಅಪ್ರಿಯವಾದ ಸತ್ಯವಲ್ಲದೇ ಮತ್ತೇನು…?
ಈ ಸಂದರ್ಭದಲ್ಲಿ ರೈಲ್ವೆ ಮೈಸೂರು ವಿಭಾಗೀಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜು, ಮಾಜಿ ತಾ.ಪಂ.ಅಧ್ಯಕ್ಷ ಎನ್.ಆರ್.ಅನಂತಕುಮಾರ್, ಸಮಾಜ ಸೇವಕ ಲಕ್ಷ್ಮಣ್ ಮತ್ತು ಇನ್ನಿತರರು ಇದ್ದರು.
