
ಚನ್ನರಾಯಪಟ್ಟಣದ ಕುವೆಂಪು ನಗರದಲ್ಲಿರುವ ಪೂರ್ಣಚಂದ್ರ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕಾಳನಹಳ್ಳಿ ಆನಂದ್ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ, ಭಾರತದ ದ್ರಾವಿಡ ಭಾಷೆಯಲ್ಲಿ ಕನ್ನಡ ಭಾಷೆಯು ತುಂಬಾ ಪುರಾತನವಾದದ್ದಾಗಿದೆ.
ಕನ್ನಡ ಭಾಷೆಯ ಎಂಟು ಜನ ಕವಿಗಳು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಭಾರತದ ಸರ್ವ ಶ್ರೇಷ್ಠ ಭಾಷೆಯಾಗಿ ಪ್ರಖ್ಯಾತಿಯನ್ನು ಹೊಂದಿದೆ, ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಮಾತನ್ನು ಎಲ್ಲಾ ವಿದ್ಯಾರ್ಥಿಗಳ ಅಳವಡಿಸಿಕೊಂಡು ಸಾಗಬೇಕು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವವನ್ನು ಕೇವಲ ನವಂಬರ್ ತಿಂಗಳು ಮಾತ್ರ ಆಚರಿಸಬಾರದು ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಮಾತೃಭಾಷೆ ಕನ್ನಡವನ್ನು ಪ್ರತಿಯೊಬ್ಬರು ಗೌರವಿಸಬೇಕು, ಮತ್ತು ಕನ್ನಡ ಭಾಷೆಯಲ್ಲಿ ವ್ಯವಾರವನ್ನು ನಡೆಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹೆಚ್ ಏನ್ ಲೋಕೇಶ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಯಾದ ಆಶಾ ವಿಜಯಕುಮಾರ್ ವಹಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಪ್ರಾಂಶುಪಾಲರಾದ ಶ್ರೀಮತಿ ಸಾವಿತ್ರಿ, ಶ್ರೀಮತಿ ಧನಲಕ್ಷ್ಮಿ, ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.



