
ಆಲೂರು : ತಾಲ್ಲೂಕಿನ ಹರಿಹಳ್ಳಿಯಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯು 68ನೇ ಕನ್ನಡರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಾಸನ ಜಿಲ್ಲಾ ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ ಕೆ ಎಸ್ ಮಂಜೇಗೌಡ ಮಾತನಾಡುತ್ತಾ “ಕನ್ನಡ ಭಾಷೆಗೆ ಬಹುದೊಡ್ಡ ಇತಿಹಾಸವಿದ್ದು, ಭಾಷೆಯ ಉಪಯೋಗ ಪಡೆದ ಎಲ್ಲರೂ ಕನ್ನಡಿಗರೆಂದೇ ಹೇಳಬೇಕು, ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ ಐವತ್ತು ವರ್ಷವಾಗಿದೆ, ಎಲ್ಲ ಭಾಷೆಗಳನ್ನೂ ಸಮಾನ ಗೌರವದಿಂದ ಕಾಣುವವರು ನಾವು, ನಮ್ಮ ಭಾಷೆಗೆ ತುಸು ಹೆಚ್ಚು ಒತ್ತು ಕೊಟ್ಟು, ನಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಣ ಕೊಡಿಸಿ, ಶಾಲೆಯ ಆರೋಗ್ಯ ಸರಿಯಾಗಿ ಕಾಪಾಡಿದರೆ ಮಾತೃಭಾಷೆಯನ್ನು ಉಳಿಸಿದ ಕೀರ್ತಿ ಕನ್ನಡಿಗರದ್ದಾಗುತ್ತದೆ” ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಧಾನ ಭಾಷಣ ಮಾಡಿದ ಯಡೇಹಳ್ಳಿ ‘ಆರ್’ ಮಂಜುನಾಥ್ ಮಾತನಾಡಿ “ಇಡೀ ರಾಷ್ಟ್ರಕ್ಕೇ ರಾಷ್ಟ್ರಧ್ವಜ ಸರಬರಾಜಾಗುವುದು ನಮ್ಮ ನಾಡಿನಿಂದ ದೇಶಕ್ಕೆಲ್ಲಾ ಮತಚಲಾವಣೆಯ ಗುರುತಿನ ಮಸಿ ಹೋಗುವುದು ಇಲ್ಲಿಂದ, ಪ್ರಪಂಚಕ್ಕೆ ಒಂಭೈನೂರು ವರ್ಷಗಳ ಹಿಂದೆಯೇ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ರಚಿಸಲಾದ, ಒಂದು ಪದ, ಒಂದು ವಾಕ್ಯ, ಒಂದು ಅರ್ಥ ವ್ಯತ್ಯಾಸವಾಗದಂತೆ ರಚಿಸಲಾಗಿರುವ ಶರಣರ ವಚನಗಳು ಈ ನೆಲದ ಕೊಡುಗೆ; ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ; ಭಾರತರತ್ನಗಳು; ಅಕಾಡೆಮಿಯ ಅಸಂಖ್ಯ ಪ್ರಶಸ್ತಿಗಳು ಸಂದಿರುವ ಸಾಹಿತ್ಯ ಕೃತಿಗಳು; ಈ ನಾಡಿನ ಮೂಲೆ ಮೂಲೆಗೆ ಹೋದರೂ ಶಿಲ್ಪಕಲೆಗಳು, ಶಾಸನಗಳು, ಕಲಾಕೌಶಲ್ಯಗಳು, ಇನ್ನೂ ಬಹಳಷ್ಟಿರುವ ನಮ್ಮ ನಾಡು ಪ್ರಕೃತಿ ಸೌಂದರ್ಯವಿರುವ ಬೀಡು, ದೇಶ ವಿದೇಶಗಳ ಲೆಖ್ಖ ಸೇರಿದರೆ ಐವತ್ತು ಬಿಲಿಯನ್ ಜನರು ಈ ನಮ್ಮ ಕನ್ನಡ ಭಾಷೆಯನ್ನು ಮಾತನಾಡುವವರಿದ್ದಾರೆ.
ಆದರೂ ರಾಜ್ಯದ ಗಡಿಭಾಗದಲ್ಲಿ ಪರಭಾಷಿಗರನ್ನು ನಮ್ಮ ವಿಧಾನಸಭೆಗೆ ಆಯ್ಕೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ, ನಮ್ಮನ್ನು ನಾವು ಆಳಿಕೊಳ್ಳುವ ಸೌಲಭ್ಯವಿರದಿದ್ದರೆ ನಾಡಿಗಾವ ಶೋಭೆ..?!” ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾ. ಪಿ ಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಬಿ ಕೆ ಲಿಂಗರಾಜು ಅವರು ಸಮಾರೋಪ ಭಾಷಣದಲ್ಲಿ “ಭಾಷೆ, ನೆಲ, ಜಲ, ಉಳಿವಿಗಾಗಿ ಕನ್ನಡಿಗರು ಕಟಿಬದ್ದರಾಗಿ ಶ್ರಮಿಸಬೇಕು; ನಾಳಿನ ಪ್ರಜೆಗಳಾದ ಮಕ್ಕಳು ಭಾಷೆಯನ್ನು ಪ್ರೀತಿಯಿಂದ ಬಳಸಬೇಕು, ನಾಡನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಬೇಕು, ಈ ಮಂಗಳ ಕಲಾ ಸಾಹಿತ್ಯ ವೇದಿಕೆಯು ಕಳೆದ ಇಪ್ಪತ್ತೈದು ವರ್ಷಗಳಿಂದ ಉತ್ತಮ ಸಾಹಿತ್ಯಿಕ ಕೆಲಸಗಳನ್ನು ಮಾಡುತ್ತಾ ಬಂದಿರುವುದನ್ನು ಕಂಡಿದ್ದೇನೆ, ಈ ಸಭಾ ವೇದಿಕೆಗೆ ದಿ. ಎನ್ ಎಸ್ ನಿರಂಜನ್ ನೆನಪಿನ ವೇದಿಕೆ ಎಂದು ಹೆಸರಿಸಿದ್ದಾರೆ, ಕಾರಣ ಇವರು ಈ ಸಂಘಟನೆಯ ಅಧ್ಯಕ್ಷರಾಗಿದ್ದರು, ಬಹಳಷ್ಟು ಪ್ರಗತಿ ಅವರ ಅಧಿಕಾರಾವಧಿಯಲ್ಲಾಗಿತ್ತು, ಕಳೆದ ವರ್ಷ ಇವರನ್ನು ಕಳೆದುಕೊಂಡಿದ್ದರಿಂದ ಸಾಹಿತ್ಯ ವೇದಿಕೆಯಷ್ಟೇ ಅಲ್ಲ ನಮಗೂ ದೊಡ್ಡ ಆಘಾತವಾಗಿದ್ದು, ಆತ್ಮೀಯರ ಅಗಲಿಕೆ ಬಹಳ ನೋವು ತಂದಿದೆ.
ಅವರಷ್ಟೇ ಬಲಿಷ್ಟವಾದ ಪ್ರಗತಿಪರವಾಗಿ ಈಗಿನ ಅಧ್ಯಕ್ಷರೂ ಕೆಲಸ ನಿರ್ವಹಿಸಿ ಸಂಘದ ಶ್ರೇಯಸ್ಸು ಮತ್ತಷ್ಟು ಎತ್ತರಕ್ಕೇರಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಕೆಂಚಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಹೆಚ್ ಡಿ ಗೋಪಾಲ, ಆಲೂರು, ಸ.ಪುರ ಕ್ಷೇತ್ರದ ಶಾಸಕರ ಪತ್ನಿ ಪ್ರತಿಭಾ ಮಂಜುನಾಥ, ಮಂ ಕ ಸಾ ವೇದಿಕೆ ಅಧ್ಯಕ್ಷರಾದ ಹೆಚ್ ಆರ್ ಕೃಷ್ಣಮೂರ್ತಿ ಮಾತನಾಡಿದರು. ನಿವೃತ್ತ ಸೈನಿಕರುಗಳಾದ ಜಿ ಪಿ ಉದಯಕುಮಾರ್, ಕೆ ಎಂ ನಂದೀಶ್, ಎನ್ ಜೆ ಲೋಕೇಶ್, ಸಮಾಜ ಸೇವಕರಾದ ಕೆ ಎಲ್ ತನುಗೌಡ, ಹಾಸನ ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ವೇದಿಕೆಯ ಸದಸ್ಯರೂ ಆದ ಹೆಚ್ ಡಿ ಸೋಮೇಶ್ ಅವರಿನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ಪೀಠದಿಂದ ಹೇಮಾ ಲೋಕೇಶ್ ಮಾತನಾಡಿದರು, ಗ್ರಾ ಪಂ ಉಪಾಧ್ಯಕ್ಷ ಕೃಷ್ಣಪ್ಪ, ಹರಿಹಳ್ಳಿಯ ಗ್ರಾ ಪಂ ಸದಸ್ಯರುಗಳಾದ ಚಂದ್ರಶೇಖರ್, ತೇಜಾವತಿ, ಕರವೇ ಹೋಬಳಿಯ ಅಧ್ಯಕ್ಷರಾದ ವಿವೇಕ್ ವೈದ್ಯನಾಥ್, ಸ ಕಿ ಪ್ರಾ ಶಾಲೆ, ನಾಗಾವರದ ಮುಖ್ಯ ಶಿಕ್ಷಕ ಎಂ ಆರ್ ವೇಣುಗೋಪಾಲ್, ಲ ಸೇ ಸಂಸ್ಥೆಯ ಹೋಬಳಿ ಕಾರ್ಯದರ್ಶಿ ಆರ್ ಎಲ್ ವೆಂಕಟೇಶ್ ಗ್ರಾ ಪಂ ಮಾಜಿ ಸದಸ್ಯ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ಮಂ ಕ ಸಾ ವೇದಿಕೆಯ ಕಾರ್ಯದರ್ಶಿ ಹೆಚ್ ಎನ್ ಸತ್ಯನಾರಾಯಣ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು, ಸೋಮೇಶ್ ವಂದಿಸಿದರು. ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ, ಕು.ಸಿಂಚನ ಶೆಟ್ಟಿ ಭರತನಾಟ್ಯ, ಹಾಸನದ *ನಮ್ಮ ಜನಪದ* ಕಲಾತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು


