ಸ್ಟ್ರೋಕ್ ಚಿಕಿತ್ಸೆ ನೀಡುವಲ್ಲಿ ದಿ|| ಡಾ. ಗುರುರಾಜ್ ಹೆಬ್ಬಾರ್ ಫೇಮಸ್ ಶಾಸಕ ಹೆಚ್.ಪಿ. ಸ್ವರೂಪ್

ಹಾಸನ: ಸ್ಟ್ರೋಕ್ ಖಾಯಿಲೆ ಎಂದರೇ ಜಿಲ್ಲೆ ಒಳಗೆ ಚಿಕಿತ್ಸೆ ನೀಡುತ್ತಿದ್ದ ದಿವಂಗತ ಗುರುರಾಜು ಹೆಬ್ಬಾರ್ ಅವರ ನೆನಪು ಬರುತ್ತದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ರೆಡ್ ಕ್ರಾಸ್ ಭವನದ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಸ್ಟ್ರೋಕ್ ಫೌಂಡೇಶನ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ಸ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪಾರ್ಶ್ವವಾಯು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಸಕ್ಕರೆ ಖಾಯಿಲೆ, ಬಿಪಿ ಇತರೆ ಖಾಯಿಲೆಗಳು ಸರ್ವಸಾಮಾನ್ಯವಾಗಿದೆ. ಕ್ಯಾನ್ಸರ್ ಕೂಡ ಈಗ ಚಿಕ್ಕವರಲ್ಲೆ ಬರುತ್ತಿದೆ. ಪಾರ್ಶ್ವವಾಯು ಎಂದರೇ ಬಹಳ ಕೆಟ್ಟ ಖಾಯಿಲೆ.

ಹಿಂದೆ ವಯಸ್ಸಾದವರಿಗೆ ಈ ಖಾಯಿಲೆ ಬರುತ್ತಿತ್ತು, ಈಗ ಯುವಕರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರುವುದು ದುರದೃಷ್ಠಕರ. ಸ್ಟ್ರೋಕ್ ಎಂದರೇ ಅದರ ಚಿಕಿತ್ಸೆ ನೀಡುವಲ್ಲಿ ನಮ್ಮ ಜಿಲ್ಲೆಯಲ್ಲಿ ಗುರುರಾಜ್ ಹೆಬ್ಬಾರ್ ಹೆಸರುವಾಸಿಯಾಗಿದ್ದರು ಎಂದು ಇದೆ ವೇಳೆ ಅವರನ್ನ ನೆನಪಿಸಿಕೊಂಡರು.

ಹಿಮ್ಸ್ ನಿರ್ದೇಶಕರಾದ ಬಿ.ಸಿ. ರವಿಕುಮಾರ್ ಮಾತನಾಡಿ, ಪಾರ್ಶ್ವವಾಯು ಎಂದರೇ ಹಿಂದೆ ವಯಸ್ಸಾದವರಲ್ಲಿ ಹೆಚ್ಚು ಕಂಡು ಬರುತ್ತಿತ್ತು. ಆದರೇ ಪ್ರಸ್ತುತದಲ್ಲಿ ಯುವ ಸಮುದಾಯದಲ್ಲಿಯೂ ಕಂಡು ಬರುತ್ತಿರುವುದನ್ನ ಕಾಣುತ್ತಿದ್ದೇವೆ. ಪ್ರತಿವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಮೆದುಳಿನ ನಿರ್ದಿಷ್ಟ ಭಾಗಕ್ಕೆ ರಕ್ತ ಪೂರೈಸುವ ರಕ್ತನಾಳ ಬ್ಲಾಕ್ ಅದಾಗ ಅಥವಾ ರಕ್ತನಾಳ ಸ್ಪೋಟಿಸಿದಾಗ ಸ್ಟ್ರೋಕ್ ಸಂಭವಿಸುತ್ತದೆ.

ಇದರಿಂದ ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ. ಅಥವಾ ಮೆದುಳಿನ ಭಾಗಗಳು ಸಂಪೂರ್ಣ ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇರುತ್ತದೆ. ಕಳಪೆ ಮಟ್ಟದ ಜೀವನಶೈಲಿಯ ಕಾರಣ ಪಾರ್ಶ್ವವಾಯು ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಿಶ್ವದಾದ್ಯಂತ ಪಾರ್ಶ್ವವಾಯು ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಅಲ್ಲದೆ ಪ್ರತಿ ವರ್ಷ ಸುಮಾರು ೧೮ ಲಕ್ಷ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ.

ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ಇದರ ಚಿಕಿತ್ಸೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು, ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ ಮತ್ತು ಕೊಬ್ಬಿನಂಶಗಳು ಹಾಗೂ ಧೂಮಪಾನ ಮದ್ಯಪಾನವನ್ನು ತ್ಯಜಿಸುವುದು, ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡುವುದು ಹಾಗೂ ಆರೋಗ್ಯಕರ ಆಹಾರ ಶೈಲಿಯ ಪಾಲನೆಯ ಮೂಲಕ ಪಾರ್ಶ್ವವಾಯುವಿಗೆ ತುತ್ತಾಗದಂತೆ ಹೇಗೆ ನೋಡಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಈ ದಿನ ಶಿಕ್ಷಣವನ್ನು ನೀಡಲಾಗುತ್ತದೆ.

ಸ್ಟ್ರೋಕ್‌ಗೆ ಒಳಗಾದವರ ಪೈಕಿ ಬಹಳಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಆದರೆ, ಸೂಕ್ತ ಸಮಯ ಅವರಿಗೆ ಚಿಕಿತ್ಸೆ ದೊರೆತರೆ ಶೇ.೯೦ರಷ್ಟು ಬದುಕಿ ಉಳಿಯುವ ಸಾಧ್ಯತೆಗಳಿವೆ. ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ ಮತ್ತು ಕೊಬ್ಬಿನಂಶಗಳು ಸ್ಟ್ರೋಕ್‌ಗೆ ಪ್ರಮುಖ ಕಾರಣಗಳಾಇವೆ. ಈ ಮೂರು ಅಂಶಗಳನ್ನು ಹೆಚ್ಚಿಸುವ ಧೂಮ್ರಪಾನ, ಮದ್ಯವ್ಯಸನ, ಡ್ರಗ್ಸ್ ಹಾಗೂ ಒತ್ತಡಯುಕ್ತ ಜೀವನಶೈಲಿ, ಕೊಬ್ಬಿನ ಆಹಾರ ಸೇವನೆ ಎರಡನೇ ಕಾರಣಗಳು. ಒಮ್ಮೆಲೆ ಕಾಣಿಸುವ ಅತಿಯಾದ ತಲೆನೋವು, ಕಣ್ಣುಮಂಜಾಗುವುದು, ಮಾತು ತೊದಲುವುದು, ಸಮತೋಲನ ತಪ್ಪುವುದು, ಎಲ್ಲವೂ ಮರೆತುಹೋದಂತೆ ಅನುಭವವಾಗುವುದು ಇವು ಪ್ರಮುಖ ಲಕ್ಷ ಣಗಳು ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಜಿ.ಟಿ. ಸುಭಾಷ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಹೆಚ್.ಪಿ. ಮೋಹನ್, ನರ ಶಾಸ್ತ್ರಜ್ಞರಾದ ಡಾ|| ಅಭಿನಂದನ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಅಬ್ದೂಲ್ ಬಶೀರ್, ಡಾ|| ಮಧುಸೂದನ್, ರಘುನಂದನ್ ನಾಡಿಗ್, ಎನ್.ಕೆ. ಮೋಹನ್ ರಾಮ್, ಸತ್ಯನಾರಾಯಣ್, ಸ್ವಾತಂತ್ರ ಹೋರಾಟಗಾರ ಹೆಚ್.ಎಂ. ಶಿವಣ್ಣ, ಶಬ್ಬೀರ್ ಅಹಮದ್, ಕೆ.ಟಿ. ಜಯಶ್ರೀ, ವಿವೇಕಾನಂದ ಯೂತ್ ಮೂವೆಂಟ್ ನ ಯೋಗಾನಾಥ್ ಇತರರು ಉಪಸ್ಥಿತರಿದ್ದರು. ನಿರ್ದೇಶಕರಾದ ಬಿ.ಆರ್. ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *