ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಇವತ್ತು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿದೆ. ಅರ್ಜುನನ ಈ ವೀರಮರಣಕ್ಕೆ ಗಣ್ಯರು, ಸಹೃದಯ ಕನ್ನಡಿಗರು ತೀವ್ರ ಕಂಬನಿ ಮಿಡಿದಿದ್ದಾರೆ. ಅರ್ಜುನನ ಅಪರೂಪದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅರ್ಜುನನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅರ್ಜುನನ ಜೊತೆ ತೆಗೆಸಿದ್ದ ಹಳೆಯ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೆಲ್ಯೂಟ್ ಮಾಡಿದ್ದಾರೆ. 8 ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ 64 ವರ್ಷದ ಅರ್ಜುನ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ. ಓಂ ಶಾಂತಿ ಎಂದು ಪೋಸ್ಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಒಂದು ಕಾಲದಲ್ಲಿ ಮೈಸೂರು ದಸರಾದ ಕೇಂದ್ರಬಿಂದುವಾಗಿದ್ದ ಅರ್ಜುನ ನಮ್ಮೆಲ್ಲರ ಹೃದಯದಲ್ಲಿ ಮರೆಯಲಾರದ ನೆನಪುಗಳನ್ನು ಬಿಟ್ಟು ಹೋಗಿದ್ದಾನೆ ಎಂದಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಗಳ ಕಾರ್ಯಾಚರಣೆ ವೇಳೆ ಮರಣ ಹೊಂದಿರುವ ಸುದ್ದಿ ತೀವ್ರ ನೋವುಂಟು ಮಾಡಿದೆ. ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಂತಾಪ ಕೋರಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಅರ್ಜುನನ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು. ಕಾಡಾನೆ ಕಾರ್ಯಾಚರಣೆಯಲ್ಲಿ ಅರ್ಜುನನು ವೀರಮರಣ ಹೊಂದಿದ್ದಾನೆ. ಲಕ್ಷಾಂತರ ಜನತೆ ಮಧ್ಯೆ ಕೇಂದ್ರ ಬಿಂದುವಾಗಿ ತಾಯಿ ಚಾಮುಂಡೇಶ್ವರಿಯನ್ನು ಎಂಟು ಬಾರಿ ಹೊತ್ತು ದಸರಾ ಮೆರವಣಿಗೆಯನ್ನು ಯಶಸ್ವಿಗೊಳಿಸಿದ್ದ ಅರ್ಜುನ ಆನೆಯು ಕೋಟ್ಯಾಂತರ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿರುತ್ತಾನೆ ಎಂದಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *