ಸಕಲೇಶಪುರ – ಸಕಲೇಶಪುರದ ಪುರಭವನದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ವತಿಯಿಂದ ಅಯೋಧ್ಯೆ ಬಲಿದಾನ ದಿವಸದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಹೋರಾಟದ ಸಂದರ್ಭದಲ್ಲಿ ಬಲಿದಾನಗೈದ ಕೊಠಾರಿ ಸಹೋದರರ ತ್ಯಾಗದ ಸ್ಮರಣಾರ್ಥವಾಗಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಅದೇ ರೀತಿ ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಮುಖಂಡರು ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಹೋರಾಟವನ್ನು ಮುಂಚೂಣಿಗೆ ತೆಗೆದುಕೊಂಡು ಬಂದಂತಹ ಅಶೋಕ್ ಸಿಂಘಾಲ್ ಜೀ ಅವರ ಜನ್ಮಶತಾಬ್ದಿಯ ಅಂಗವಾಗಿಯೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ಇದರ ಜೊತೆಗೆ, ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 175 ಜನರ ಪ್ರಾಣವನ್ನು ರಕ್ಷಿಸಿದ ಸಾಹಸಿ ಪೈಲಟ್ ಸ್ಮಿತ್ ಮಚಾರ್ ಅವರ ಸಾಹಸಗಾಥೆಯನ್ನು ಸ್ಮರಿಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ಬಾಚೇಹಳ್ಳಿ ಪ್ರತಾಪ್ ಗೌಡರವರ ನಿಧನಕ್ಕೆ ಶೋಕಾಚರಣೆ ಸಲ್ಲಿಸಿ, ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ದೀರ್ಘಕಾಲದಿಂದ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡುತ್ತಾ, ಕಾರ್ಯಕರ್ತರ ಕಷ್ಟ-ಸುಖಗಳಲ್ಲಿ ಸದಾ ಜೊತೆಯಾಗಿ ನಿಂತಿದ್ದ ಪ್ರತಾಪ್ ಗೌಡರವರ ಸೇವೆ ಮತ್ತು ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾದ ಸಂದರ್ಭಗಳಲ್ಲಿಯೂ ಅವರ ಬೆನ್ನಿಗೆ ನಿಂತು ಧೈರ್ಯ ತುಂಬಿದ ಅವರ ಸೇವೆಯನ್ನು ನೆನಪಿಸಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂಚಲ ಕುಮಾರ್ ಸ್ವಾಮಿಯವರು, ಪ್ರತಾಪ್ ಗೌಡರವರು ಸಂಘಟನೆಗೆ ಯಾವ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದರೋ, ಅದೇ ರೀತಿಯಲ್ಲಿ ತಾವು ಕೂಡ ಸದಾ ಸಂಘಟನೆ ಮತ್ತು ಕಾರ್ಯಕರ್ತರೊಂದಿಗೆ ಇರುತ್ತೇವೆ ಎಂಬ ಭರವಸೆಯನ್ನು ನೀಡಿದರು.

ರಕ್ತದಾನ ಮಾಡುವುದಕ್ಕೆ ಬಡವ-ಶ್ರೀಮಂತ ಎಂಬ ಭೇದವಿಲ್ಲ. ರಕ್ತದಾನ ಮಾಡಲು ಬೇಕಾಗಿರುವುದು ಸೇವಾ ಮನೋಭಾವ ಮತ್ತು ಸಹಾಯ ಮಾಡುವ ಹೃದಯ ಮಾತ್ರ. ಪ್ರತಾಪ್ ಗೌಡರವರು ಸಮಾಜಕ್ಕೆ ನೀಡಿದ ಕೊಡುಗೆಯಂತೆ, ಇಂದು ರಕ್ತದಾನ ಮಾಡುವ ಮೂಲಕ ಕಾರ್ಯಕರ್ತರೆಲ್ಲರೂ ಕೂಡ ಶ್ರೇಷ್ಠವಾದ ಮಾನವೀಯ ಸೇವೆಯಲ್ಲಿ ಪಾಲ್ಗೊಂಡಿದ್ದೀರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ್ ಅವರು ಮಾತನಾಡಿ, ರಕ್ತದಾನವು ಮಹಾದಾನವಾಗಿದ್ದು, ಇಂತಹ ಶಿಬಿರಗಳ ಮೂಲಕ ಕಾರ್ಯಕರ್ತರಲ್ಲಿ ರಕ್ತದಾನದ ಮಹತ್ವ ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೀವ ರಕ್ಷಣಾ ನಿಧಿಯ ವ್ಯವಸ್ಥಾಪಕರಾದ ಸೀತಾಮೋಹನ್, ಹಾಸನ ರಕ್ತಕೇಂದ್ರದ ವ್ಯವಸ್ಥಾಪಕರಾದ ಕಾಂತರಾಜು, ಹಿಂದೂ ಹಿತರಕ್ಷಣಾ ವೇದಿಕೆಯ ತಾಲ್ಲೂಕು ಗೋರಕ್ಷ ಪ್ರಮುಖರಾದ ದೀಪಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಂಜುಳಾ ಅವರು ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ ಸಕಲೇಶಪುರ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ವಿಶೇಷವಾಗಿ ಮಹಿಳೆಯರು ಕೂಡ ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಒಟ್ಟಾರೆಯಾಗಿ 187 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈಜೋಡಿಸಿದರು.ಬಲಿದಾನಿಗಳ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಸಮಾಜದ ಸಂಕಷ್ಟದ ಸಮಯದಲ್ಲಿ ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ ಈ ರಕ್ತದಾನ ಶಿಬಿರವು ಅಯೋಧ್ಯೆ ಬಲಿದಾನ ದಿವಸದ ಆಚರಣೆಗೆ ಅರ್ಥಪೂರ್ಣ ಕೊಡುಗೆಯಾಯಿತು.

ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರುಗಳಾದ ಮಂಜುನಾಥ್ ಕಬ್ಬಿನ ಗದ್ದೆ. ಕೌಶಿಕ್ ಹೆಚ್.ಎಂ. ಶಿವು ಜಿಪ್ಪಿ. ರವಿ ಹೆಬ್ಬಸಾಲೆ. ದೀಪಕ್. ಹರೀಶ್. ಶ್ರೀ ಜಿತ್ ಗೌಡ. ವಿಜಿತ್ ಗೌಡ. ಶೇಖರ್ ಸಿದ್ದಾಪುರ. ಸೇರಿದಂತೆ ಇತರರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *