600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ೮೬ ವರ್ಷದ ಲೀಲಾವತಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಲೀಲಾವತಿ ಅವರು ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ನಟಿ ಲೀಲಾವತಿ ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ೬೦೦ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಲೀಲಾವತಿ ೫೦ ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದ ನಟ ದಿಗ್ಗಜರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಜೊತೆ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದು, ಸೈ ಎನಿಸಿಕೊಂಡಿದ್ದರು. ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕವೂ ಲೀಲಾವತಿ ಗುರುತಿಸಿಕೊಂಡಿದ್ದರು.

ಲೀಲಾವತಿ ಅವರು ೧೯೪೯ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಸುಬ್ಬಯ್ಯ ನಾಯ್ಡು ಅವರ ’ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಲೀಲಾವತಿ ಅಭಿನಯಿಸಿದ್ದರು. ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು.

ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅಲ್ಲದೆ ನಾಯಕರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.

ಲೀಲಾವತಿ ಅವರು ತಮ್ಮ ೫೦ ವರ್ಷಗಳ ವೃತ್ತಿಜೀವನದಲ್ಲಿ ೬೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ’ಭಕ್ತ ಕುಂಬಾರ’, ’ಮನ ಮೆಚ್ಚಿದ ಮಡದಿ’ ಮತ್ತು ’ಸಂತ ತುಕಾರಂ’ ಚಿತ್ರಗಳಲ್ಲಿನ ಸ್ಮರಣೀಯ ನಟನೆ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ರಾಜಕುಮಾರ್ ಅವರ ಮಗಳಾಗಿ (’ಭೂದಾನ’ದಲ್ಲಿ), ತಂಗಿಯಾಗಿ (’ವಾತ್ಸಲ್ಯ’ದಲ್ಲಿ), ಅತ್ತಿಗೆಯಾಗಿ (’ಪ್ರೇಮಮಯಿ’ಯಲ್ಲಿ) ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ಅವರಿಗೆ ಸಿಕ್ಕಿತು. ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ನಟನಾಗಿದ್ದು, ’ಡ್ಯಾನ್ಸ್ ರಾಜಾ ಡ್ಯಾನ್ಸ್’, ’ಕೃಷ್ಣಾ ನೀ ಕುಣಿದಾಗ’, ’ಕಾಲೇಜ್ ಹೀರೋ’ ಮತ್ತು ’ಮಹಾಭಾರತ’ ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *