
ಹಾಸನ: ತಂಬಾಕು ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ಅವಶ್ಯಕತೆ ಇದ್ದು, ಈ ಮೂಲಕ ತಂಬಾಕು ರಹಿತ ಆರೋಗ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಕರೆ ನೀಡಿದರು.
ನಗರದ ಕೇಂದ್ರ ಗ್ರಂಥಾಲಯ ಬಳಿ ಇರುವ ವಾಣಿವಿಲಾಸ ಶಾಲೆಯ ಬಾಲಕಿಯರ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಇಲಾಖೆ, ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗುಲಾಬಿ ಆಂದೋಲನ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಮಾಜದಲ್ಲಿ ಜನ್ಮತಾಳಿರುವ ನಾವು ಪ್ರೀತಿಯಿಂದ ಇರುವ ಮೂಲಕ ಜೀವನ ಸಾಗಿಸಬೇಕಾಗಿದೆ ಹೊರತು ತಂಬಾಕು ಹಂಚುವುದಾಗಲಿ, ತಂಬಾಕು ಉತ್ಪನ್ನ ಪದಾರ್ಥ ಹಂಚುವುದಾಗಲಿ ಇದರಿಂದ ಯಾವ ಪ್ರೀತಿಯನ್ನು ಹಂಚುವುದಕ್ಕೆ ಆಗುವುದಿಲ್ಲ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ತಂಬಾಕು ಉತ್ಪನ್ನವು ಮನುಷ್ಯನ ಶರೀರ ಸೇರಿದರೇ ದೇಹದ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ, ಮಾನಸಿಕ ಖಾಯಿಲೆಗಳು ಸಹ ಉದ್ಭವಿಸುತ್ತದೆ. ಇಂತಹ ತಂಬಾಕು ಸೇವನೆಗೆ ಸಂಪೂರ್ಣ ತಡೆ ಹಾಕುವ ಮೂಲಕ ಉತ್ತಮ ಸಮಾಜ ಕಟ್ಟಬೇಕಾಗಿದೆ. ಮಕ್ಕಳು ಎಂದರೇ ಸಮಾಜದ ಆಸ್ತಿ. ಆರೋಗ್ಯಕರ ಜೀವನ ನಡೆಸಬೇಕಾದರೇ ಮೊದಲು ಅಂತಹ ವಾತವರಣ ನಿರ್ಮಿಸುವ ಅವಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಅನೀಲ್ ಅವರು ಮಾತನಾಡಿ, ತಂಬಾಕು ಸಾಂಕ್ರಾಮಿಕವಾದ ವಿಶ್ವವು ಎದುರಿಸಿದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ತಂಬಾಕು ಭಾರತದ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಸಾಮಾನ್ಯ ಅಪಾಯಕಾರಿ ಅಂಶವಾಗಿದೆ. ತಂಬಾಕಿನಿಂದ ಆರೋಗ್ಯದ ಮೇಲೆ ಹೊರೆ ಆಗಲಿದೆ ಎಂದರು.
ಬಾಯಿಯ ಕ್ಯಾನ್ಸರ್ ನಾಲಿಗೆ, ಧ್ವನಿಪೆಟ್ಟಿಗೆ ಮತ್ತು ಗಂಟಲಕುಳಿ, ಅನ್ನನಾಳ, ಹೊಟ್ಟೆ, ಪಿತ್ತಕೋಶ, ಮೂತ್ರಕೋಶ, ಗರ್ಭಾಶಯದ ಗರ್ಭಕಂಠ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ-ನಾಳೀಯ ಕಾಯಿಲೆಗಳು ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು ಕ್ಷಯರೋಗದೊಂದಿಗೆ ಸಂಬಂಧ ಹೊಂದಿವೆ. ಕಡಿಮೆ ಜನನ ತೂಕದ ಮಕ್ಕಳು, ಪುರುಷರಲ್ಲಿ ಫಲವತ್ತತೆ ಮತ್ತು ಲೈಂಗಿಕ ದುರ್ಬಲತೆ ಕಡಿಮೆ ಆಗುವುದು,ಆರಂಭಿಕ ವಯಸ್ಸಾದ ಮತ್ತು ಚರ್ಮದ ಸುಕ್ಕು, ಪ್ರಬುದ್ಧ ಪೂರ್ವ ಸಾವುಗಳು ಕಾಣಿಸಿಕೊಳ್ಳುತ್ತದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್, ಬೀಡಿ ಮತ್ತು ಹುಕ್ಕಾದಂತಹ ತಂಬಾಕು ಉತ್ಪನ್ನಗಳನ್ನು ಬಳಸಿದಾಗ ಅದರಿಂದ ಉಂಟಾಗುವ ಹೊಗೆಯು ಆ ಸ್ಥಳವನ್ನು ಆವರಿಸಿ ಅಲ್ಲಿರುವ ಜನರು ಅದನ್ನು ಉಸಿರಾಟದ ಮೂಲಕ ಸೇವಿಸುವಂತಾದರೆ ಅದನ್ನು ಪರೋಕ್ಷ ಧೂಮಪಾನ ಎನ್ನುತ್ತೇವೆ ಎಂದು ಹೇಳಿದರು.
ಶಾಲಾ ಮಕ್ಕಳು ಕೈಲಿ ಗುಲಾಬಿ ಹಿಡಿದು ಜಾಗೃತಿ ಜಾಥದ ಮೂಲಕ ಸಾರ್ವಜನಿಕರಿಗೆ ಗುಲಾಬಿ ನೀಡಿದಲ್ಲದೇ ತಂಬಾಕು ಪದಾರ್ಥಗಳ ಸೇವನೆ ಮಾಡದಂತೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಹ ಶಿಕ್ಷಕರಾದ ಸವಿತಾ, ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಪ್ರಾಂಶುಪಾಲರಾದ ಪ್ರೇಮಾಲತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ವೇದಣ್ಣ, ಆರೋಗ್ಯಾ ಇಲಾಖೆಯ ನಾಗೇಶ್ ಆರಾಧ್ಯ, ನಾಗಪ್ಪ, ಗೀತಾ, ಅರುಂಧತಿ ಇತರರು ಉಪಸ್ಥಿತರಿದ್ದರು.




