
ಹಾಸನ: ಸಂಸತ್ ದಾಳಿ ಕುರಿತು ಲೋಕಾಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದ ೧೪೬ ಜನ ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಇ.ಹೆಚ್. ಲಕ್ಷ್ಮಣ್ ಮಾಧ್ಯಮದೊಂದಿಗೆ ಮಾತನಾಡಿ, ಇತ್ತೀಚೆಗೆ ಸಂಸತ್ ಭವನಕ್ಕೆ ಕಿಡಿಗೇಡಿಗಳು ನುಗ್ಗಿ ಸಂಸತ್ ಭವನದ ಒಳಗಡೆ ಹಾಗೂ ಹೊರಗಡೆ ಹೊಗೆ ಬಾಂಬುಗಳನ್ನು ಸಿಡಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.
ಸಂಸತ್ತಿನಲ್ಲಿ ಭದ್ರತಾ ವೈಫಲ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ಈ ಘಟನೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷಗಳ ಸಂಸದರು ಪ್ರಶ್ನಿಸಿ ಸೂಕ್ತ ವಿವರಣೆ ನೀಡುವಂತೆ ಆಗ್ರಹಿಸಿದ್ದರಿಂದ ಮತ್ತು ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿದ್ದರಿಂದ ಸಹಿಲಾರದ ಆಡಳಿತಾರೂಡ ಕೇಂದ್ರ ಬಿ.ಜೆ.ಪಿ. ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸಿ ಲೋಕಸಭೆಯ ೯೭ ಮತ್ತು ರಾಜ್ಯ ಸಭೆಯ ೪೬ ಒಟ್ಟಾಗಿ ೧೪೬ ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದ್ದು, ದೇಶದ ಇತಿಹಾಸದಲ್ಲಿ ಇದೊಂದು ಕರಾಳ ದಿನವಾಗಿದೆ. ಯಾವತ್ತೂ ನಡೆದಿಲ್ಲ ಹಾಗೂ ಭವಿಷ್ಯದಲ್ಲಿ ನಡೆಯದಂತಹಾ ಘಟನೆ ನಡೆದಿದೆ ಎಂದರು. ದೇಶದ ೧೪೦ ಕೋಟಿ ಜನರಿಗೆ ಪ್ರಧಾನಿ ಉತ್ತರ ಕೊಡಬೇಕಿದೆ ಎಂದು ಸವಾಲು ಎಸೆದರು.
ಈ ಕ್ರಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದ್ದು, ವಿಪಕ್ಷಗಳನ್ನು ಧಮನ ಮಾಡುವ ಸರ್ವಾಧಿಕಾರಿ ಧೋರಣೆಯಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಹೆಚ್.ಕೆ. ಜವರೇಗೌಡ, ಪಟೇಲ್ ಶಿವಪ್ಪ, ಮಂಜುನಾಥ್ ಶರ್ಮ, ರಾಮಚಂದ್ರ, ಹೆಚ್.ಕೆ. ಪ್ರಕಾಶ್, ಶಂಕರರಾಜು, ರಘು ದಾಸರಕೊಪ್ಪಲು, ಹರೀಶ್, ವೆಂಕಟೇಗೌಡ, ಬೂದೇಶ್, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.



