ಸಕಲೇಶಪುರ : ಸಕಲೇಶಪುರ ಪಟ್ಟಣದ ಸುಭಾಷ್ ಕ್ರೀಡಾಂಗಣದಲ್ಲೇ ಸಕಲೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ನಡೆಯಲಿರುವ ಜಾತ್ರೆ ಹಾಗೂ ವಸ್ತುಪ್ರದರ್ಶನವನ್ನು ನಡೆಸಬೇಕೆಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡ ರಘು ಮಾತನಾಡಿ ಸಕಲೇಶ್ವರಸ್ವಾಮಿ ರಥೋತ್ಸವ ಇಡಿ ರಾಜ್ಯಕ್ಕೆ ಹೆಸರುವಾಸಿಯಾಗಿರುವ ರಥೋತ್ಸವವಾಗಿದೆ.

ಕಳೆದ 65 ವರ್ಷಗಳಿಂದ ಪಟ್ಟಣದಲ್ಲಿ ಪ್ರತಿವರ್ಷ ಹಳೆಸಂತೆ ಮೈದಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಈ ಬಾರಿ ಪುರಸಭೆ ತ್ಯಾಜ್ಯ ಹಾಗೂ ಜಾಗದ ಸಮಸ್ಯೆ ತಲೆದೊರಿರುವುದರಿಂದ 66 ನೇ ಜಾತ್ರೆ ವಸ್ತುಪ್ರದರ್ಶನ ನಡೆಸುವುದು ಸರಿಯಾದ ಜಾಗವಿಲ್ಲದ ಕಾರಣ ಅನಿವಾರ್ಯವಾಗಿ ಸುಭಾಷ್ ಮೈದಾನದಲ್ಲಿ ಕ್ರೀಡಾಪಟುಗಳ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಡೆಸಲು ತೀರ್ಮಾನಿಸಲಾಗಿದೆ.

ಆದರೆ ಕೆಲವರು ಇದನ್ನು ವಿರೋಧ ಮಾಡುತ್ತಿರುವುದು ಖಂಡನೀಯ ಇದು ತಾಲೂಕಿನ 1,20,000 ಜನರಿಗೆ ಮಾಡುವ ಅವಮಾನವಾಗಿದೆ.

ಶಾಸಕರು ಸಕಲೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 10 ಲಕ್ಷಕ್ಕೂ ಹೆಚ್ಚಿನ ಅನುದಾನ ನೀಡಲು ಮುಂದಾಗಿದ್ದಾರೆ. ಅಲ್ಲದೆ ಶಾಸಕರು ವಸ್ತುಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಈ ಬಾರಿ ಹೊರೆಯಾಗದಂತೆ ಕನಿಷ್ಠ ದರ ನಿಗದಿ ಪಡಿಸಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಜಾತ್ರೆ ಮಹೋತ್ಸವವನ್ನು ಸುಭಾಷ್ ಮೈದಾನದಲ್ಲೆ ಆಯೋಜಿಸಬೇಕು ಇಲ್ಲದಿದ್ದಲ್ಲಿ ರಥೋತ್ಸವದ ದಿನ ಪ್ರತಿಭಟನೆ ಮಾಡುವುದಾಗಿ ಹೇಳಿದರು.

ಬಿಜೆಪಿ ಮುಖಂಡ ವಳಲಹಳ್ಳಿ ಅಶ್ವಥ್ ಮಾತನಾಡಿ ಪ್ರತಿವರ್ಷ ಸಕಲೇಶ್ವರಸ್ವಾಮಿರವರ ರಥೋತ್ಸವದ ಅಂಗವಾಗಿ ನಡೆಯುತ್ತಿದ್ದ ಜಾತ್ರೆ ಮೈದಾನವನ್ನು ತಮ್ಮದೆಂದು ವ್ಯಕ್ತಿಯೋರ್ವರು ತಡೆಯಾಜ್ಞೆ ತಂದಿರುವುದರಿಂದ ಜಾತ್ರೆ ನಡೆಸಲು ಜಾಗದ ಅಭಾವವಾಗಿದೆ.

ಈ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಸುಭಾಷ್ ಮೈದಾನದಲ್ಲಿ ಜಾತ್ರೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಕ್ರೀಡಾಪಟುಗಳು ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸಲು ಅಡ್ಡಿ ಪಡಿಸಬಾರದು. ಅಲ್ಲದೆ ಜಾತ್ರೆ ವಸ್ತುಪ್ರದರ್ಶನದಿಂದ ಬರುವ ಆದಾಯವನ್ನು ಸುಭಾಷ್ ಮೈದಾನದ ಅಭಿವೃದ್ದಿಗೆ ಬಳಸಲಾಗುವುದು ಎಂದು ಸಹ ಹೇಳಿದ್ದಾರೆ. ಆದರೆ, ಶಾಸಕರ ತೇಜೋವದೆಗಾಗಿ ಒಂದು ತಂಡ ಕೆಲಸ ಮಾಡುತ್ತಿದೆ.

ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಶಾಸಕರಿಗೆ ಹಾಗೂ ಪುರಸಭೆ ತೀರ್ಮಾನಕ್ಕೆ ಸಹಕರಿಸಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ನವೀನ್ ಶೆಟ್ಟಿ, ರಘು ಗೌಡ, ಜಾನೆಕೆರೆ ಲೋಕೇಶ್, ಭಾಸ್ಕರ್, ಚೇತನಾ, ಕೌಶಿಕ್, ಜಾತಹಳ್ಳಿ ಚಂದ್ರು, ಅಗ್ನಿ ಸೋಮು, ವಿನಯ್ ವೀರ, , ದುಷ್ಯಂತ್ ಗೌಡ, ಪುರಸಭಾ ಮಾಜಿ ಸದಸ್ಯ ಮೋಹನ್ ಮುಂತಾದವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *