
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಂಜೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೆಲ್ಲಾ ಮನೆ ತಲುಪುವವರೆಗೂ ಕಾದು, ಜೀವನೋಪಾಯಕ್ಕಾಗಿ ತರಹೇವಾರಿ ಕಸುಬುಗಳನ್ನು ನಿರ್ವಹಿಸುತ್ತಿರುವ ಪೋಷಕರೆಲ್ಲಾ ಮನೆಗೆ ಬರುವುದನ್ನೆ ಎದುರು ನೋಡುತ್ತಾ ಕಾಡಾನೆಗಳ ಸಮಸ್ಯೆಯ ನಡುವೆಯೂ ಕತ್ತಲಾದ ಕೂಡಲೆ ಏಕಾಏಕಿ ಎಸ್ಸೆಸ್ಸೆಲ್ಸಿಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ಶಾಕ್ ನೀಡುತ್ತಿರುವುದರ ಜೊತೆಗೆ ಪರೀಕ್ಷಾ ಭಯವನ್ನು ನಿವಾರಿಸಿ ವಿದ್ಯಾರ್ಥಿಗಳನ್ನು ಮುಂಬರುವ ಪರೀಕ್ಷೆಗೆ ಹುರಿದುಂಬಿಸುವ ಕಾರ್ಯವನ್ನು ಶಿಕ್ಷಣಾಧಿಕಾರಿಗಳು ಮಾಡುತ್ತಿದ್ದಾರೆ.
ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ ನಾರಾಯಣ್ ಈ ಬಾರಿಯಾದರೂ ಜಿಲ್ಲೆಯ ಫಲಿತಾಂಶದಲ್ಲಿ ತಾಲೂಕಿನ ಮಹತ್ತರ ಕೊಡುಗೆ ನೀಡಲು ವಿಶಿಷ್ಟ ರೀತಿಯಲ್ಲಿ ಪ್ರಯತ್ನಿಸುತ್ತಿರುವುದನ್ನು ಮನಗಂಡು ವಿದ್ಯಾರ್ಥಿ ಪೋಷಕರು ಶಿಕ್ಷಣಾಧಿಕಾರಿಗಳ ಕಾರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ.
ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಆಯಾ ಹೋಬಳಿ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕಚೇರಿಯ ಶಿಕ್ಷಣ ಸಂಯೋಜನಾಧಿಕಾರಿಗಳ ಸಹಕಾರದೊಂದಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುತ್ತಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳ ಕಲಿಕಾ ವಾತಾವರಣ, ಮನೆ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಟಿವಿ ಹಾಗೂ ಮೊಬೈಲ್ ನಿಷೇಧ, ಓದುವ ಸಮಯದಲ್ಲಿ ಸಮರ್ಪಕ ಬೆಳಕು, ಕುರ್ಚಿ, ಟೇಬಲ್ ವ್ಯವಸ್ಥೆ, ಮನೆ ವೇಳಾಪಟ್ಟಿ, ಮುಖ್ಯ ಅಂಶಗಳ ಚಾರ್ಟ್ ತಯಾರಿಕೆ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಯುವವರಿಗೆ ಸಂಪರ್ಕದಲ್ಲಿರುವಂತೆ ತಿಳಿಸಿ ತಮ್ಮ ಖಾಸಗಿ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ.



