ಅರಕಲಗೂಡು: ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಧ್ವಜದ ಬಗ್ಗೆ ಗೌರವ ಹಾಗೂ ದೇಶಪ್ರೇಮ ಕಲಿಸಿ ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಜಿಪಿಟಿ ಶಿಕ್ಷಕರು ಹೆಚ್ಚಿನ ಗಮನ ನೀಡುವಂತೆ ಶಾಸಕ ಎ.ಮಂಜು ತಿಳಿಸಿದರು.

ಭಾರತ ಸೇವಾದಳದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಜಿಲ್ಲಾ ಭಾರತ ಸೇವಾದಳ ಅರಕಲಗೂಡು, ಆಲೂರು, ಹೊಳೆನರಸೀಪುರ, ಚೆನ್ನರಾಯಪಟ್ಟಣ ತಾಲ್ಲೂಕುಗಳ ಹೊಸದಾಗಿ ನೇಮಕವಾಗಿರುವ ಜಿಪಿಟಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಭಾರತ ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದರು.

1923 ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಶಿಸ್ತನ್ನು ತರಲು ಮಹತ್ಮಾ ಗಾಂಧಿ, ಜವಹರಲಾಲ್ ನೆಹರು ಅವರಂತಹ ಮಹನೀಯರು ಹುಟ್ಟುಹಾಕಿದ ಭಾರತ ಸೇವಾದಳ ಶತಮಾನೋತ್ಸವ ಸಂಭ್ರಮ ಆಚರಿಸುತ್ತಿದೆ. ಇಂದಿನ ಮಕ್ಕಳು ದೈಹಿಕ ವ್ಯಾಯಾಮ, ಕ್ರೀಡಾಚಟುವಟಿಗಳನ್ನು ಮರೆತು ಮೊಬೈಲ್ ಗೀಳಿಗೆ ಸಿಲುಕಿದ್ದಾರೆ. ಇದು ಅವರ ದೈಹಿಕ, ಮಾನಸಿಕ ಮತ್ತು ಕುಟುಂಬದ ಮೇಲೆ ಕೆಟ್ಟಪರಿಣಾಮ ಬೀರುತ್ತಿದೆ.

ಇಂತಹ ಮಕ್ಕಳಲ್ಲಿ ಶಿಸ್ತು ಮೂಡಿಸಿ ಅವರನ್ನು ಆಟ,ಪಾಠಗಳಲ್ಲಿ ತೊಡಗುವಂತೆ ಮಾಡುವ ದೊಡ್ಡ ಜವಾಬ್ದಾರಿ ಜಿಪಿಟಿ ಶಿಕ್ಷಕರ ಮೇಲೆ ಇದೆ. ವಾರ ಕಾಲ ನಡೆದ ಶಿಬಿರದಲ್ಲಿ ನೀವು ಕಲಿತಿರುವುದನ್ನು ಮಕ್ಕಳಿಗೆ ಕಲಿಸಿ ಅವರಲ್ಲಿ ಶಿಸ್ತು ಬೆಳೆಸಿದಾಗ ಶಿಬಿರದ ಉದ್ದೇಶ ನೆರವೇರುತ್ತದೆ. ಬಹಳಷ್ಟ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಖಾಸಗಿ ಶಾಲೆಗಳಂತೂ ಕಲಿಕೆ ಬಿಟ್ಟರೆ ಕ್ರೀಡಾ ಚಟುವಟಿಕೆಗಳಿಗೆ ಗಮನವನ್ನು ಹರಿಸುತ್ತಿಲ್ಲ ಈ ಕುರಿತು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಸಮಾರೋಪ ಭಾಷಣ ಮಾಡಿದ ಬಿಇಒ ದೇವರಾಜ್, ಇಲ್ಲಿ ಪಡೆದ ತರಬೇತಿಯ ಸಹಾಯದಿಂದ ಮಕ್ಕಳಲ್ಲಿ ಬದಲಾವಣೆ ತರುವ ಮೂಲಕ ಶಿಸ್ತುಬದ್ದ ಸಮಾಜ ರೂಪಿಸಲು ನೂತನ ಶಿಕ್ಷಕರು ಕೊಡುಗೆ ನೀಡಬೇಕು ಎಂದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಕೆ.ಕಮಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ಸುರೇಶ್, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಯೋಗೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಯ್ಯ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಜಿಲ್ಲಾ ಸೇವಾದಳದ ವಲಯ ಸಂಘಟಕಿ ಹಾಗೂ ಶಿಬಿರಾಧಿಕಾರಿ ವಿ.ಎಸ್.ರಾಣಿ, ಉಪಶಿಬಿರಾಧಿಪತಿ ಬಿ.ಎನ್ ಮಹೇಶ್, ಕಾರ್ಯದರ್ಶಿ ಜಿ.ದೀಪ, ಸಹಕಾರ್ಯದರ್ಶಿ ಸಂಜೀವ್ ಕುಮಾರ್, ವಸ್ತು ನಾಯಕರಾದ ಎಚ್.ಮಹೇಶ್, ಎಸ್.ಎಂ. ನಿರ್ವಾಣಪ್ಪ, ಸಂಪನ್ಮೂಲ ವ್ಯಕ್ತಿ ಪ್ರೇಮಾನಂದ್, ಶಿಬಿರದ ಸಹಾಯಕಿ ಆರ್.ರತ್ನಕುಮಾರಿ ಇದ್ದರು.

ಶಿಬಿರಾರ್ಥಿಗಳು ವಿವಿಧ ಕವಾಯತುಗಳ ಪ್ರದರ್ಶನ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *