
ಬೇಲೂರು : ಪಟ್ಟಣದ ತಾಲ್ಲೂಕು ಸವಿತಾ ಸಮಾಜದ ಕಚೇರಿಯಲ್ಲಿ ಪ್ರತ್ಯೇಕವಾಗಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಹಾಲಿ ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರ ನಡುವೆ ಮಾರಾಮಾರಿ ನಡೆದಿದೆ.
ಸವಿತಾ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಸವಿತಾ ಸಮಾಜದ ಟ್ರಸ್ಟ್ ಅಧ್ಯಕ್ಷ ನರಸಿಂಹಸ್ವಾಮಿ ಬೇಲೂರು ಪಟ್ಟಣದ ತಾಲ್ಲೂಕು ಸವಿತಾ ಸಮಾಜದ ಕಚೇರಿಯಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಶಿವರಾಂ ಭಾಗವಹಿಸಿದ್ದರು.
ಈ ವೇಳೆ ಕಚೇರಿಗೆ ನುಗ್ಗಿದ ತಾಲ್ಲೂಕು ಸವಿತಾ ಸಮಾಜದ ಹಾಲಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಹಾಗೂ ಬೆಂಬಲಿಗರು ಸರ್ಕಾರಿ ಕಾರ್ಯಕ್ರಮ ನಡೆಯುತ್ತಿರುವಾಗ ಪ್ರತ್ಯೇಕವಾಗಿ ಏಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಎರಡು ಬಣದವರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಕಚೇರಿಯೊಳಗೆ ಎರಡು ಬಣದವರು ಬಡಿದಾಡಿಕೊಳ್ಳುತ್ತಿದ್ದಂತೆ ಮಾಜಿಸಚಿವ ಬಿ.ಶಿವರಾಂ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ. ನಂತರ ಕಚೇರಿಗೆ ಹಾಕಿದ್ದ ಬೋರ್ಡ್‌ನ್ನು ಪ್ರಕಾಶ್ ಬೆಂಬಲಿಗರು ಕಿತ್ತು ಎಸೆದು ನರಸಿಂಹಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ಬಣಗಳ ಮಾರಾಮಾರಿಯಿಂದ ಕಾರ್ಯಕ್ರಮ ನಿಂತುಹೋಗಿದೆ.




