.

ಹಾಸನ: ನಾಮಫಲಕದಲ್ಲಿ ಶೇಕಡ ೬೦ ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಗಢುವು ನೀಡಿ ಜಾಥದ ಮೂಲಕ ಜಾಗೃತಿ ಮೂಡಿಸಿದ್ದರೂ ಅನೇಕರು ಲೆಕ್ಕಿಸದೇ ಹೆಚ್ಚಿನ ಇಂಗೀಷ್ ಬಳಕೆ ಮಾಡಿದ್ದ ಬ್ಯಾನರ್, ಕಟೌಟ್, ಅಂಗಡಿ ಮುಂದೆ ನಾಮ ಫಲಕವನ್ನು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಕಾರ್ಯಕರ್ತರು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತೆರಳಿ ನಗರಸಭೆಯ ಸಹಕಾರದಲ್ಲಿ ಎಲ್ಲಾವನ್ನು ಹರಿದು ಹಾಕಿ ಮಸಿ ಬಳೆಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಮೊದಲು ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಕರವೇ ಕಾರ್ಯಕರ್ತರು ಜೊತೆಗೆ ಮುಂಜಾಗೃತ ಕ್ರಮವಾಗಿ ಪ್ರತಿಭಟನಗಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕೂಡ ಬಸ್, ಇತರೆ ಹತ್ತಾರು ವಾಹನದಲ್ಲಿ ಬಂದು ಸೇರಿದ್ದರು.
ಪ್ರತಿಭಟನೆಗೆ ಮೊದಲು ನಗರಸಭೆ ಅಧಿಕಾರಿಗಳು ಪ್ರತಿಭಟನಗಾರರನ್ನು ಮನವೊಲಿಸಲು ಮುಂದಾದರು. ನಾವೆ ಆಂಗ್ಲ ಪದಗಳಿರುವ ಕಟೌಟ್ ಮತ್ತು ಬ್ಯಾನರುಗಳನ್ನು ತೆರವು ಮಾಡುವುದಾಗಿ ಹೇಳಿದರು.
ಮೊದಲು ಘೋಷಣೆ ಕೂಗಿದ ಕರವೇ ಕಾರ್ಯಕರ್ತರು ಕೆ.ಎಸ್.ಆರ್.ಟಿ.ಸಿ. ಆವರಣದಲ್ಲಿ ಮುಖ್ಯ ರಸ್ತೆಗೆ ಕಾಣುವಾಗೆ ಇದ್ದ ಬೃಹತ್ ಬ್ಯಾನರ್ ನ್ನು ನಗರಸಭೆಯ ಸಿಬ್ಬಂದಿಗಳ ಜೊತೆ ತೆರವು ಮಾಡಿದರು.
ನಂತರ ಬಿ.ಎಂ. ರಸ್ತೆ ಮೂಲಕ ಬಂದ ಪ್ರತಿಭಟನಾಗಾರರು ಟ್ರೆಂಡ್ಸ್ ಎದುರು ಇದ್ದ ಅನೇಕ ಆಂಗ್ಲ ಕಟೌಟ್ ಗಳನ್ನು ಹರಿದು ಹಾಕಲಾಯಿತು.
ಈ ದರಶ್ಯವನ್ನು ನೋಡಿದ ಇತರೆ ಅಂಗಡಿ ಮಾಲೀಕರು, ಶೋರಂ ಮಾಲೀಕರು ಮೊದಲೆ ಆಂಗ್ಲ ಪದಗಳಿರುವ ಬೋರ್ಡ್‌ಗಳನ್ನು ಬಟ್ಟೆಯಿಂದ ಮುಚ್ಚಿತ್ತಿರುವುದು ಕಂಡು ಬಂದಿತು. ಕೆಲವರು ಅಡ್ಡಿ ಪಡಿಸಿದಾಗ ವಾಗ್ವಾದ ಕೂಡ ಕೇಳಿ ಬಂದಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಶಾಂತಿ ಕಾಪಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬ ಹಕ್ಕೊತ್ತಾಯವನ್ನು ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಚಳವಳಿ ಕೈಗೊಂಡಿದ್ದು, ಕಳೆದ ವರ್ಷ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇತಿಹಾಸವನ್ನೇ ಸೃಷ್ಟಿಸಿತು.
ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಕನ್ನಡೇತರ ನಾಮಫಲಕಗಳು ಧರೆಗುರುಳಿದವು. ನಮ್ಮ ಚಳವಳಿಗೆ ರಾಜ್ಯದ ಜನತೆ ತುಂಬು ಮನಸಿನಿಂದ ಬೆಂಬಲಿಸಿತು. ಕನ್ನಡ ನಾಮಫಲಕ ಬೇಕು ಎಂದು ದಶಕಗಳಿಂದ ಹಂಬಲಿಸುತ್ತಿದ್ದ ಮನಸುಗಳಿಗೆ ಸಮಾಧಾನ ತಂದ ಬಹುದೊಡ್ಡ ಹೋರಾಟವಾಗಿದೆ ಎಂದರು.
ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡಿತು. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿರುವುದರಿಂದ ಅದು ಕಾನೂನಾಗಿ ಕೂಡ ಜಾರಿಯಾಗಿದೆ.
ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ಯಾಕಾಗಿ ಸಹಿಸುವುದು? ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನುಡಿ ಸೊರಗಬೇಕೇ? ಹೀಗಾಗಿ ಕನ್ನಡದಲ್ಲಿ ನಾಮಫಲಕ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಇಡೀ ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಜಾಹೀರಾತು ಫಲಕಗಳು ಕೂಡ ಕನ್ನಡದಲ್ಲಿರಬೇಕು. ಇದನ್ನು ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಪಾಲಿಸುವುದು ಕಡ್ಡಾಯವಾಗಿದೆ.
ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿಬಿಡಲಿ. ಕನ್ನಡಿಗರು ಯಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಬೇಡಿ. ಕನ್ನಡದಲ್ಲಿನಾಮಫಲಕ ಹಾಕದವರು ಕನ್ನಡದ್ರೋಹಿಗಳು, ನಾಡದ್ರೋಹಿಗಳು. ಅವರಿಗೆ ಈ ನಾಡಿನಲ್ಲಿ ಇರುವ ಯೋಗ್ಯತೆ ಇಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟವೇ ಹೊರತು, ಯಾವುದೇ ಭಾಷೆ, ಭಾಷಿಕರ ವಿರುದ್ಧವಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜಾಗೃತಿ ಮೆರವಣಿಗೆಯನ್ನು ನಡೆಸುತ್ತಿದ್ದು, ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಸರ್ಕಾರದ ನಿಯಮಾವಳಿ ಪ್ರಕಾರ ನಾಮಫಲಕಗಳನ್ನು ಬದಲಿಸಬೇಕು, ಕನ್ನಡೀಕರಿಸಬೇಕು. ಇದು ನಮ್ಮ ಆಗ್ರಹ. ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಓಹಿಲೇಶ್, ಸೀತರಾಮ್, ಹೇಮಂತ್ ಕುಮಾರ್, ಸೋಮಶೇಖರ್, ಪ್ರೀತಂರಾಜ್, ರೇಖಾಮಂಜುನಾಥ್, ಆಲ್ವೀನ್, ಚಂದ್ರಶೇಖರ್, ರಘು ಪಾಳ್ಯ, ಗಣೇಶ್ ಗೌಡ, ತೋಫಿಕ್ ಪಾಷಾ, ಶಿವಣ್ಣಗೌಡ, ತುಳಸಿದಾಸ್, ಶ್ರಿಧರ್, ತನುಗೌಡ ಇತರರು ಭಾಗವಹಿಸಿದ್ದರು.





