
ಹಾಸನ: ನೀವೇ ಬನ್ನಿ ನೀವೇ ನಿಲ್ಲಬೇಕು ಎಂದು ಜನತೆ ಹಠ ಮಾಡುತ್ತಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಲೋಕಾಸಭೆಯಲ್ಲಿ ಸ್ಪರ್ದೆ ಮಾಡುತ್ತಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಎಸ್.ಸಿ./ಎಸ್.ಟಿ. ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮಂಡ್ಯದಿಂದ ಕುಮಾರಸ್ವಾಮಿ ಹಾಗೂ ಕೋಲಾರದಿಂದ ಮಲ್ಲೇಶ್ ಬಾಬು ಫೈನಲ್ ಆಗಿ ತೀರ್ಮಾನ ಮಾಡಲಾಗಿದೆ. ಮಂಡ್ಯದ ಜನರು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಿಡುತ್ತಿಲ್ಲ. ನೀವೇ ಬನ್ನಿ ನೀವೇ ನಿಲ್ಲಬೇಕು ಎಂದು ಜನತೆ ಹಠ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ಕೂಡಲೇ ಮಂಡ್ಯಕ್ಕೆ ಬನ್ನಿ ಎಂದಿದ್ದಾರೆ.
ಇವತ್ತು ಕೋರ್ ಕಮಿಟಿ ಸಭೆಯಲ್ಲು ನೀವೇ ನಿಲ್ಲಬೇಕು ಅಂದರು. ನಮಗೆ ಕೊಟ್ಟಿರುವುದು ನಾಲ್ಕು ಸೀಟು. ಆದರೆ ನಾನು ಹಾಗೇ ಅಂದುಕೊಂಡಿರುವುದಿಲ್ಲ. ಬೀದರ್‌ನಲ್ಲಿ ಅಣೆಕಟ್ಟು ಕಟ್ಟಿದವರು ಯಾರು? ಲಿಫ್ಟ್ ಇರಿಗೇಷನ್ ಮಾಡಿ ನೀರು ಕೊಟ್ಟವರು ಯಾರು? ಎಂದ ಅವರು ಎಂಟು ಮೀಡಿಯಂ ಪ್ರಾಜೆಕ್ಟ್ ಮಾಡಿದ್ದೇನೆ. ದೇವೇಗೌಡರು ಏನು ಮಾಡಿದರು ಅನ್ನೋದು ಈ ರಾಜ್ಯದ ಮೂಲೆ ಮೂಲೆಗೆ ಗೊತ್ತಿದೆ. ಈ ಬಗ್ಗೆ ಜಮಾದಾರ್ ಎನ್ನುವವರು ಪುಸ್ತಕ ಬರೆದಿದ್ದಾರೆ ಎಂದರು.
ಕೋಲಾರದಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಬಗ್ಗೆ ಮಾತನಾಡಿದ ಅವರು, ಕೋಲಾರದ್ದು ಬೇರೆ ಪ್ರಶ್ನೆಯೇ ಇಲ್ಲ. ಮಲ್ಲೇಶ್ ಬಾಬು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ೨೮ ಸ್ಥಾನವನ್ನು ಗೆಲ್ಲಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.
