
ಹಾಸನ: ಹಿಂದೆಂದು ಕೇಳದಂತಹ ಬೆಲೆ ೨೦೨೪ರ ಯುಗಾದಿ ಹಬ್ಬದಲ್ಲಿ ಕಂಡು ಬಂದಿದ್ದು, ಹಳದಿ ಸೇವಂತಿಗೆ ಒಂದು ಮಾರಿಗೆ ೨೦೦ ರೂಗಳ ಗಡಿ ದಾಟಿ ಮಾರಾಟ ಮಾಡಲಾಗುತ್ತಿದೆ.
ನಗರದ ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ, ಸ್ಲೇಟರ‍್ಸ್ ಹಾಲ್, ಎಂ.ಜಿ. ರಸ್ತೆ, ಬಿ.ಎಂ. ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಸಾಲಗಾಮೆ ರಸ್ತೆ ಇತರೆ ಪ್ರಮುಖ ಸ್ಥಳಗಳಲ್ಲಿ ಯುಗಾದಿ ಹಬ್ಬಕ್ಕೆ ಅವಶ್ಯಕವಾಗಿ ಬೇಕಾಗಿರುವ ಹೂವು, ಮಾವಿನ ಸಪ್ಪು, ಬಾಳೆಹಣ್ಣು, ಇತರೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಹಳದಿ ಸೇವಂತಿಗೆ ಇದುವರೆಗೂ ಅತೀ ಹೆಚ್ಚು ಎಂದರೇ ಒಂದು ಮಾರಿಗೆ ೧೫೦ಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಈ ಬಾರಿ ೨೦೦ಕ್ಕೆ ದಾಟಿದೆ. ನೂರು ರೂಗಳ ಸೇವಂತಿ ಮಾರಾಟವು ಕೂಡ ಇದ್ದರೂ ಅದು ಅಷ್ಟೊಂದು ಉತ್ತಮವಾಗಿರಲಿಲ್ಲ. ಇನ್ನು ಮಾವಿನ ಸಪ್ಪು ಒಂದು ಕಟ್ಟಿಗೆ ೨೦ ರೂಗಳಿಗೆ ಮಾರಾಟ ಮಾಡುತ್ತಿದ್ದರು.
ಪುಟ್ಬಾಳೆ ಒಂದು ಕೇಜಿಗೆ ೭೦ ರಿಂದ ೧೨೦ ರೂಗಳಿಗೆ ಮಾರುತಿದ್ದರು. ಹೂವಿನ ಬೆಳೆ ಕೇಳಿ ಕೆಲವರು ಆಶ್ಚರ್ಯಪಟ್ಟರೇ, ಹೂವು ಹಬ್ಬಕ್ಕೆ ಬೇಕಾಗಿರುವುದರಿಂದ ಬೆಲೆ ಏರಿಕೆ ನಡುವೆಯೂ ಒಂದು ಮಾರು ಖರೀದಿ ಮಾಡುವ ಕಡೆ ಅರ್ಧ ಮಾರಿಗೆ ಗ್ರಾಹಕರು ಬಂದಿದ್ದರು.
ಹೂವು ಮಾರಾಟಗಾರರು ಹೇಳುವಂತೆ ಮಳೆ ಇಲ್ಲದೆ ಎಲ್ಲಾ ಬೆಳೆ ನಾಶವಾಗಿರುವುದರಿಂದ ಬೆಲೆಗಳು ಕೂಡ ಗಗನಕ್ಕೆ ಏರಿದೆ ಎಂದರು.






