
ಹಾಸನ: ನನಗೆ ಪ್ರೀತಿ ತೋರಿಸಿದರೇ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೇನೆ. ಏನಾದರೂ ನನ್ನ ಮೇಲೆ ದೂರು ಮಾಡಿದರೇ ರಾಜಕೀಯವನ್ನೇ ಬಿಟ್ಟು ಮನೆಯಲ್ಲಿ ಕೂರುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಹೆಸರಿನಲ್ಲಿಯೇ ಮತ ಕೇಳುತ್ತೇನೆಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿಕೆ ಕೊಡುವ ಮೂಲಕ ಎಲ್ಲೂ ಕೂಡ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಹೆಸರು ಹೇಳಲೆ ಇಲ್ಲ.
ಹೈಕಮಾಂಡ್ ಸೂಚನೆಗೆ ಮಣಿದು ಎನ್‌ಡಿಎ ಅಭ್ಯರ್ಥಿ ಪರ ನಗರದ ವಿದ್ಯಾನಗರದಿಂದ ಪ್ರಚಾರ ಆರಂಭಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ. ಮೈತ್ರಿ ಅಭ್ಯರ್ಥಿ ಪರ ಇದೇ ಮೊದಲ ಬಾರಿಗೆ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಇಳಿದು ಕರಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನರೇಂದ್ರಮೋದಿ ಅವರು ಪ್ರಧಾನಮಂತ್ರಿ ಆಗಬೇಕು ಎಂದು ಪ್ರಚಾರ ಆರಂಭಿಸಿದ್ದೇನೆ.
ರಾಜ್ಯದಲ್ಲಿ ೨೮ ಕ್ಕೆ ೨೮ ಸ್ಥಾನ ಗೆಲ್ಲುವ ಮೂಲಕ ಇಡೀ ದೇಶದಲ್ಲಿ ೪೦೦ ಕ್ಕೂ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು. ಹಿರಿಯರು ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ನಮ್ಮ ಬೂತ್ ನಂಬರ್ ೮೯ ರಿಂದ ಪ್ರಚಾರ ಆರಂಭಿಸಿದ್ದೇವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು.
೨೦೨೧ ಬೂತ್ ಹಾಸನ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ನಾಳೆ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಲೂರಿನಲ್ಲಿ ಪ್ರಚಾರ ಮಾಡಲು ಸೂಚನೆ ಕೊಟ್ಟಿದ್ದೇನೆ. ನಾವು ಈ ಚುನಾವಣೆಯನ್ನು ಚಾಲೆಂಗ್ ಆಗಿ ತೆಗೆದುಕೊಂಡಿದ್ದೇನೆ. ಎನ್‌ಡಿಎ ಕೂಟ ಗೆಲ್ಲಿಸುವುದೇ ನಮ್ಮ ಗುರಿ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ಮತವನ್ನು ಹೆಚ್ಚಿಗೆ ಕೊಡಿಸಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ.
ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿಗಿಂತ ಎನ್‌ಡಿಎ ಅಭ್ಯರ್ಥಿ ಎಷ್ಟು ಲೀಡ್ ತಗೊತರೊ ಅದಕ್ಕಿಂತ ಒಂದು ಮತ ಹೆಚ್ಚಿಗೆ ಕೊಡಿಸುವುದು ನನ್ನ ಗುರಿ. ಯಾರೇ ಆದರೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಹೆಸರಿನಲ್ಲೇ ಓಟು ಕೇಳಬೇಕು. ಕರ್ನಾಟಕದಿಂದ ಕಾಶ್ಮೀರದವರೆಗೂ ಮೋದಿ ಅವರ ಹೆಸರಿನಲ್ಲಿ ಮತ ಕೇಳಬೇಕು ಎಂದ ಅವರು, ಎಲ್ಲಿಯೂ ಪ್ರಜ್ವಲ್ ರೇವಣ್ಣ ಅವರ ಹೆಸರು ಬಳಕೆ ಮಾಡಲಿಲ್ಲ. ಅವರು ಆರು ಭಾರಿ ಶಾಸಕರು, ಅವರ ತಂದೆ ಪ್ರಧಾನಮಂತ್ರಿ ಆಗಿದ್ದವರು.
ಎನ್‌ಡಿಎ ಅಭ್ಯರ್ಥಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಮತ ತೆಗೆದುಕೊಳ್ಳುತ್ತಾರೆ ಅದಕ್ಕಿಂತ ಒಂದು ಮತ ಹೆಚ್ಚಿಗೆ ಕೊಡಿಸುತ್ತೇನೆ. ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ.
ನಾನು ಸೋತಿರುವವನು, ನನ್ನ ಬಳಿ ಶ್ರಮ ಇದೆ. ಅವರ ಶಾಸಕರು ಇದ್ದಾರೆ ಶಕ್ತಿ ಅವರ ಬಳಿ ಇದೆ. ಪ್ರಜ್ವಲ್ ರೇವಣ್ಣ, ಜೆಡಿಎಸ್ ಪಕ್ಷ, ಚಿಹ್ನೆಯ ಹೆಸರನ್ನು ಹೇಳದ ಪ್ರೀತಂಗೌಡ ಒಗಟಾಗಿ ಮಾತನಾಡಿದರು.
ನಾನು ಪ್ರೀತಿ ತೋರಿಸಿದರೆ ಕೆಲಸ ಮಾಡುವವನು. ಕಂಪ್ಲೆಂಟ್ ಮಾಡಿದರೆ ನನಗೆ ರಾಜಕೀಯ ಬೇಡ ಅಂತ ಮನೆಯಲ್ಲಿ ಕೂರ್ತಿನಿ. ನನಗೆ ಯಾವ ರಾಜ್ಯ ನಾಯಕರು ಸೂಚನೆ ಕೊಟ್ಟಿಲ್ಲ. ಯಾವ ರಾಜ್ಯ ನಾಯಕರನ್ನಾದರೂ ಕೇಳಿ? ಬಾವಿ ಕಪ್ಪೆಯಾಗಿ ಇರುವುದು ಬೇಡ ಅಂತ ಎರಡು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ.
ಒಬ್ಬ ಸರ್ಕಾರಿ ನೌಕರರ ಮಗನನ್ನು ರಾಜ್ಯಮಟ್ಟದಲ್ಲಿ ಬೆಳೆಸುವುದೇ ಬಿಜೆಪಿ ಪಕ್ಷ. ಬೂತ್ ಗೆದ್ದರೆ ದೇಶ ಗೆಲ್ಲಬಹುದು ಎಂಬು ಕಲ್ಪನೆ ನಮ್ಮದು. ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಮೇಲೆ ತೀರ್ಮಾನ ಆದ ಮೇಲೆ ಕೆಲಸ ಮಾಡಬೇಕು. ಯಾರು ಯಾರನ್ನ ಸಂಪರ್ಕ ಮಾಡುವುದು ಇರುವುದಿಲ್ಲ. ನಮ್ಮ ರಾಜ್ಯಾಧ್ಯಕ್ಷರ ಏನು ಸೂಚನೆ ಕೊಡ್ತಾರೆ ಆ ಕೆಲಸ ಮಾಡ್ತಿನಿ. ಈಗಾಗಲೇ ಬೂತ್ ಮಟ್ಟದ ಪದಾಧಿಕಾರಿಗಳು, ತಾಲ್ಲೂಕು, ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನನ್ನ ವಿರೋಧಿಗಳು ಯಾರು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಅವಾಗವಾಗ ನಾನು ಹಾಸನಕ್ಕೆ ಬರ್ತಿರ್ತಿನಿ ಎಂದರು
ಆದರೇ ಅಪ್ಪಿತಪ್ಪಿಯೂ ಜೆಡಿಎಸ್ ನಾಯಕರು, ಪಕ್ಷ, ಚಿಹ್ನೆ, ಅಭ್ಯರ್ಥಿ ಹೆಸರು ಹೇಳದ ಪ್ರೀತಂಗೌಡ. ನರೇಂದ್ರಮೋದಿ ಅವರು ಹಾಸನಕ್ಕೆ ಪ್ರಚಾರಕ್ಕೆ ಬರುವುದು ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೆ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಬೂತ್ ಅಧ್ಯಕ್ಷ ದರ್ಶನ್, ನಗರ ಮಂಡಲ ಅಧ್ಯಕ್ಷ ಯೋಗೀಶ್, ವಿದ್ಯಾನಗರದ ಮುಖಂಡ ಗುರುಪ್ರಸಾದ್, ಅಂಗಡಿ ಮಂಜಣ್ಣ., ವೆಂಕಟೇಶ್, ತಾಪಂ ಮಾಜಿ ಸದಸ್ಯ ಪ್ರದೀಪ್, ತುಳಸಿ ಪ್ರಸಾದ್, ಸುಜೀತ್, ಸತ್ಯಮಂಗಲದ ಹರ್ಷಿತ್, ಸತ್ಯಮಂಗಲ ಗೀರಿಶ್, ರಾಜೇಶ್ ಇತರರು ಉಪಸ್ಥಿತರಿದ್ದರು.
