
ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ನೆಟ್ ಅಂಗಡಿ ಮೇಲೆ ನೂರಾರು ಜನರಿರುವ ಗುಂಪೊಂದು ಏಕಾಏಕಿ ದಾಳಿ ಮಾಡಿ ಗಾಜುಗಳನ್ನು ಪುಡಿಪುಡಿ ಮಾಡಿದಲ್ಲದೇ ಬಿಜೆಪಿ ಮುಖಂಡ ಐನೆಟ್ ವಿಜಿಕುಮಾರ್ ಸೇರಿ ಮೂವರ ಮೇಲೆ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಮದ್ಯಾಹ್ನ ೧೨:೧೦ ರಲ್ಲಿ ನಡೆದಿದೆ.
ಬಿಜೆಪಿ ಮಾಧ್ಯಮ ವಕ್ತಾರ ಹಾಗೂ ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್ ಅಂಗಡಿಯಲ್ಲಿ ಕೆಲಸದ ನಿಮಿತ್ತ ಕುಳಿತಿರುವಾಗ ಏಕಾ ಏಕಿ ಅಂಗಡಿಗೆ ನುಗ್ಗಿರುವ ೫೦ಕ್ಕೂ ಹೆಚ್ಚು ಜನರು ಇರುವ ಗುಂಪೊಂದು ನೆಟ್ ಕಛೇರಿಯ ಗಾಜುಗಳನ್ನು ಮೊದಲು ಹೊಡೆದು ಹಾಕಿದ್ದಾರೆ.
ನಂತರ ಮಾಲೀಕ ಐನೆಟ್ ವಿಜಯ್ ಕುಮಾರ್ ಮೇಲೆ ಹಲ್ಲೆ ಮಾಡಲಾಗಿದ್ದು, ಪ್ರಶ್ನೆ ಮಾಡಿ ರಕ್ಷಣೆ ಮಾಡಲು ಬಂದ ಸ್ನೇಹಿತರಾದ ಪ್ರಮೋದ್ ಮತ್ತು ಸಂದೇಶ್ ಅವರ ಮೇಲೂ ಕೂಡ ಹಲ್ಲೆ ಮಾಡಿದಲ್ಲದೇ ದೇಹದ ನಾನಾ ಕಡೆ ಗಾಯಗೊಳಿಸಿದ್ದಾರೆ.
ತಕ್ಷಣ ಮೂವರು ಗಾಯಳುಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ಮೇಲೆ ಇತ್ತಿಚೆಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಐನೆಟ್ ವಿಜಯಕುಮಾರ್ ಮನೆಗೆ ಹೋಗಿ ಚರ್ಚೆ ಮಾಡಿದ್ದರು. ನಂತರ ಈ ಹಲ್ಲೆ ನಡೆದಿದೆ. ಹಲ್ಲೆಯಾದ ನೆಟ್ ಕಛೇರಿ ಸ್ಥಳಕ್ಕೆ ಹಾಗೂ ಹಿಮ್ಸ್ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿ ಗಾಯಳುಗಳಿಂದ ಮಾಹಿತಿ ಪಡೆದರು.
ಹಲ್ಲೆ ಮಾಡುವಾಗ ನಮ್ಮ ಪ್ರೀತಂ ಅಣ್ಣನ ಬಗ್ಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡಿದ ಕೀಡಿಗೇಡಿಗಳು ಮಾತನಾಡಿದ್ದಾರೆ. ತಲೆ, ಹೊಟ್ಟೆ, ಭಾಗಕ್ಕೆ ಹೆಚ್ಚಿನ ಹಲ್ಲೆಗಳನ್ನು ಕಿಡಿಗೇಡಿಗಳು ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಹಾಸನದಲ್ಲಿ ರೌಡಿಸಂ ರಾಜಕೀಯ ಶುರುವಾದಂತೆ ಕಂಡು ಬಂದಿದೆ.
ಹಲ್ಲೆಗೊಳಗಾದ ಐನೆಟ್ ವಿಜಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಾನು ನೆಟ್ ಕಛೇರಿಯಲ್ಲಿದ್ದಾಗ ಚೆಕ್ ಬರೆಯುವ ವೇಳೆ ಓರ್ವ ಒಳಗೆ ಬಂದು ನೀವು ವಿಜಿಕುಮಾರ್ ಅಲ್ವ ಎಂದು ಪ್ರಶ್ನೆ ಮಾಡಿದಲ್ಲದೇ ಮಾತನಾಡಬೇಕು ಹೊರಗೆ ಬನ್ನಿ ಎಂದು ಕರೆದರು. ಕುಳಿತುಕೊಳ್ಳಿ ಇಲ್ಲೆ ಮಾತನಾಡೋಣ ಎಂದು ಹೇಳಿದೆ. ನಂತರ ಹಲವಾರು ಜನರು ಒಳಗೆ ಬಂದು ನನಗೆ ಹೊಡೆಯಲು ಪ್ರಾರಂಭಿಸಿದರು.
ಪ್ರೀತಂ ಗೌಡರ ಮೇಲೆ ನೀನು ಮಾತನಾಡುತ್ತೀಯಾ ಎಂದು ಹೇಳುತ್ತಿದ್ದರು. ನಾನು ಯಾವಾಗ ಮಾತನಾಡಿದೆ ಗೊತ್ತಿಲ್ಲ. ನೂರಾರು ಜನರು ನಮ್ಮ ನೆಟ್ ಕಛೇರಿ ಮುಂದೆ ಇದ್ದರು. ಹಲ್ಲೆ ಮಾಡಿದವರನ್ನು ನಾನು ನೋಡಿದ್ದೇನೆ. ಬಿಜೆಪಿ ಕಾರ್ಯಕರ್ತರು ಈರೀತಿ ಮಾಡುವುದಿಲ್ಲ. ಪ್ರೀತಂಗೌಡರ ಕಡೆಯವರೆ ಈ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಬಿಜೆಪಿ ಮುಖಂಡರಾದಂತಹ ಐನೆಟ್ ವಿಜಿಕುಮಾರ್ ಅವರ ಮೇಲೆ ಸುಮಾರು ೧೨ ಗಂಟೆಯ ಸಮಯದಲ್ಲಿ ಕೆಲ ಕಿಡಿಗೇಡಿಗಳು ಅವರ ಅಂಗಡಿಗೆ ನುಗ್ಗಿ ಹಲ್ಲೆ ಮಾಡುವ ಕೆಲಸ ಮಾಡಿದ್ದು, ಅಂಗಡಿಯನ್ನು ಕೂಡ ಹೊಡೆದು ಹಾಕಿದ್ದಾರೆ. ಘಟನೆ ನಡೆದ ತಕ್ಷಣ ಜೆಡಿಎಸ್ ಪಕ್ಷದಿಂದ ಎಲ್ಲಾ ಕಾರ್ಯಕರ್ತರು ಆಗಮಿಸಿ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಲಾಗಿದೆ. ಅವರ ದೇಹದ ಮೇಲೆ ಅನೇಕ ಕಡೆ ಗಾಯಗಳಾಗಿದೆ ಎಂದರು.
ಎಸ್ಪಿ ಅವರಿಗೂ ಕೂಡ ಈ ಘಟನೆ ಬಗ್ಗೆ ತಿಳಿಸಿ ದೂರು ದಾಖಲಾಗಿಸಿದೆ. ಈಗಾಗಲೇ ಪರಿಶೀಲನೆ ಮಾಡುತ್ತಿದ್ದಾರೆ. ಯಾರು ತಪ್ಪಿಕಸ್ತ ದುಷಕರ್ಮಿಗಳಿದ್ದಾರೆ ಅವರನ್ನು ಶೀಘ್ರದಲ್ಲಿಯೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಈ ರೀತಿ ಘಟನೆಗಳು ಆಗಬಾರದು. ಪ್ರಜಾಪ್ರಭುತ್ವದಲ್ಲಿ ಎಲ್ಲಾರೂ ಕೂಡ ಮಾತನಾಡುವ ಹಕ್ಕಿದೆ. ಏನೆ ಬಂದರೂ ತಾಳ್ಮೆಯಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಇಂತ ಘಟನೆಗಳು ಸಂಭವಿಸಬಾರದು. ಚುನಾವಣೆಯನ್ನು ಚುನಾವಣೆ ತರನೆ ಮಾಡಬೇಕಾಗಿದೆ. ರಾಜಕೀಯ ಉದ್ದೇಶ ಏನು ಎಂಬುದು ಗೊತ್ತಿಲ್ಲ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ಸುಮುಖ ರಘು, ಬಿದರಿಕೆರೆ ಜಯರಾಂ, ಹೆಚ್.ಎಸ್. ಅನೀಲ್ ಕುಮಾರ್, ಆರ್.ಎಸ್.ಎಸ್. ಮುಖಂಡ ಮೋಹನ್ ಕುಮಾರ್, ವಿಶಾಲ್ ಅಗ್ರವಾಲ್ ಇತರರು ಉಪಸ್ಥಿತರಿದ್ದರು.
