
ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ಒಂದು ಅಪೂರ್ವ ಘಟನೆ ನಡೆಯಿತು, ಇಲ್ಲಿನ ಕೆಂಚಾಂಬಾ ದೇವಸ್ಥಾನಕ್ಕೆ ಸಕಲೇಶಪುರ ತಾಲೂಕಿನ ಆದರಗೆರೆ ದೊಡ್ಡನಹಳ್ಳಿಯ ಕನ್ನಂಬಾಡಿಯಮ್ಮನ ಅಡ್ಡೆ; ಬೆಳ್ಳಿಯ ರಥದಲ್ಲಿ ವಾದ್ಯಮೇಳ, ಕೊಂಬು, ಕಹಳೆ, ಕೀಲುಕುದುರೆ, ಕರಗ ನೃತ್ಯದೊಂದಿಗೆ ಅದ್ದೂರಿ ಉತ್ಸವದಲ್ಲಿ ಆಗಮಿಸಿತ್ತು.
ದೇವಸ್ಥಾನದಲ್ಲಿ ತಳಿರು ತೋರಣ, ತಂಪು ಮಜ್ಜಿಗೆಯ ಪಾನೀಯ ನೀಡಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪೌಳಿಯಲ್ಲಿ ಕನ್ನಂಬಾಡಿಯಮ್ಮನ ಉತ್ಸವ ಅಡ್ಡೆಯನ್ನು ಮೂರು ಪ್ರದಕ್ಷಿಣೆ ಹಾಕಿ ಮುಖಮಂಟಪದಲ್ಲಿ ಕುಳ್ಳಿರಿಸಲಾಯ್ತು.
ಕೆಂಚಮ್ಮನ ಗರ್ಭಗುಡಿಯಲ್ಲಿ , ಕನ್ನಂಬಾಡಿಯಮ್ಮನಿಗೆ ಮಡಿಲು ತುಂಬಿಸಿದ್ದ ಹಣ್ಣು ಹಂಪಲು, ಫಲಗಳನ್ನು ಸಮರ್ಪಿಸಿ ಪ್ರಸಾದವನ್ನು ಬಂದಿದ್ದ ಮುಖಂಡರ ಮೂಲಕ ಕನ್ನಂಬಾಡಿ ಅಮ್ಮನಿಗೆ ಕಳುಹಿಸಲಾಯಿತು.
ಅರ್ಚಕ ರಾಮಸ್ವಾಮಿ ಇಬ್ಬರೂ ಅಕ್ಕ-ತಂಗಿಯರಿಗೆ ಮಂಗಳಾರತಿ ಮಾಡಿ, ತೀರ್ಥ ಪ್ರಸಾದ ನೀಡಿದರು.
ಬಂದಿದ್ದ ಸರ್ವರಿಗೂ ಊಟದ ವ್ಯವಸ್ಥೆಯನ್ನು ಅನ್ದದಾಸೋಹ ಸಮಿತಿ ಮಾಡಿತ್ತು, ಸ್ಥಳೀಯ ಪಂಚಾಯ್ತಿ ಸದಸ್ಯ ಚಂದ್ರಶೇಖರ್ ಹಾಗೂ ಅವರ ಮಿತ್ರರು ಬಂದವರಿಗೆಲ್ಲಾ ಮಜ್ಜಿಗೆ ನೀಡುವ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋಪಾಲ್ (ರಘು), ಸಮಿತಿಯ ಸದಸ್ಯರು, ಆದರಗೆರೆ-ದೊಡ್ಡನಹಳ್ಳಿಯ ಮುಖಂಡರಾದ ಪುಟ್ಟಮ್ಮ, ಮಂಜುನಾಥಗೌಡ, ವಿಶ್ವನಾಥ, ಹೂವಣ್ಣ ಅರ್ಚಕವರ್ಗದ ಸುಬ್ರಹ್ಮಣ್ಯ, ನರಹರಿ ಭಟ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.
ಸುಮಾರು ನೂರೈವತ್ತಕ್ಕೂ ಹೆಚ್ಚು ಜನ ಕಾಲ್ನಡಿಗೆಯಲ್ಲಿ ಸುಮಾರು ಎಂಟು ಕಿ. ಮೀ. ದೂರದಿಂದ ಬಂದಿದ್ದು ವಿಶೇಷವಾಗಿತ್ತು.


