
ಬೇಲೂರು ;-ಪ್ರವಾಸಿ ತಾಣ ಬೇಲೂರು ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ನಾಡ ರಥೋತ್ಸವ ಮುಕ್ತಾಯವಾದ ಮರುದಿನ ಐತಿಹಾಸಿಕ ಪ್ರಸಿದ್ದ ವಿಷ್ಣು ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ ಅತ್ಯಂತ ಭಕ್ತಿ ಭಾವದಿಂದ ನಡೆಸಲಾಯಿತು. ತೆಪ್ಪೋತ್ಸವ ಕಾರ್ಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಹೌದು! ಶಿಲ್ಪಕಲೆಗಳ ನಾಡು,ಚನ್ನಕೇಶವನ ಭಕ್ತಿಯ ಬೀಡು ಎಂದೇ ಖ್ಯಾತಿ ಹೊಂದಿರುವ ಬೇಲೂರಿನಲ್ಲಿ ಪ್ರತಿವರ್ಷ ಯುಗಾದಿ ಬಳಿಕ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬ್ರಹ್ಮರಥೋತ್ಸವ, ನಾಡ ರಥೋತ್ಸವ ನಡೆದ ಬಳಿಕ ಮರುದಿನ ಚನ್ನಕೇಶವಸ್ವಾಮಿ,ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ಉತ್ಸವಮೂರ್ತಿಗೆ ಉಯ್ಯಾಲೋತ್ಸವ, ಡೋಲೋತ್ಸವ, ಓಕಳಿ ಬಳಿಕ ತೀರ್ಥಸ್ನಾನಕ್ಕಾಗಿ ಐತಿಹಾಸಿಕ ಪ್ರತಿದ್ದ ವಿಷ್ಣುಕಲ್ಯಾಣಿ ಅಥಾವ ತೆಪ್ಪದಕೊಳದಲ್ಲಿ ತೆಪ್ಪೋತ್ಸವ ನಡೆಸುವ ವಾಡಿಕೆ ಶತ-ಶತಮಾನದಿಂದಲೂ ನಡೆದುಕೊಂಡು ಬಂದಿದೆ.
ತಪ್ಪೋತ್ಸವ ಕಾರ್ಯ ಸುಮಾರು ಮುರು ದಶಕಗಳ ಕಾಲ ಸ್ಥಗಿತವಾಗಿತ್ತು. ಬಳಿಕ ಬೇಲೂರಿನ ಬಾಳೆಹಣ್ಣು ರಮೇಶಣ್ಣ ಮತ್ತು ಕೇಶವನ್ ಕುಟುಂಬವರ್ಗದವರು ೨೦೧೨ ರಿಂದ ಕೋವಿಡ್ ಹೊರತು ಪಡಿಸಿ ತೆಪ್ಪೋತ್ಸವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಳೆದ ಐದಾರು ವರ್ಷದಿಂದ ಈ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ತೆಪ್ಪದ ಮೇಲಿನ ಕೇಶವನ ದರ್ಶನ ಪಡೆದು ಧನ್ಯರಾಗುತ್ತಾರೆ.
ಇತ್ತೀಚಿನ ದಿನದಲ್ಲಿ ತೆಪ್ಪವನ್ನು ತಗಡಿನ ಡ್ರಮ್‌ಗಳನ್ನು ಕಬ್ಬಿಣದ ರಾಡುಗಳಿಂದ ಜೋಡಿಸಿ, ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲು ವೇದಿಕೆಯನ್ನು ನಿರ್ಮಿಸಲಾಗುತ್ತದೆ. ಉತ್ಸವಮೂರ್ತಿಗೆ ಎಂದೇ ಸುಂದರ ಮಂಟಪಕ್ಕೆ ಪುಷ್ಪಾಲಂಕಾರ ಮತ್ತು ದೀಪಾಲಂಕಾರ ಮಾಡಲಾಗುತ್ತದೆ. ತೆಪ್ಪೋತ್ಸವ ನಡೆಸುವ ಮುನ್ನ ಅಲಂಕೃತವಾದ ಮಂಟಪಕ್ಕೆ ಚನ್ನಕೇಶವಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪನೆ ನಡೆಸಿ ಇಲ್ಲಿನ ಆಗಮಿಕರಾದ ಶ್ರೀನಿವಾಸಭಟರ್ ಮಹಾಮಂಗಳಾರತಿ ನಡೆಸಿದ ಬಳಿಕ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಚಲುವ ಚನ್ನಿಗ ಉತ್ಸವಮೂರ್ತಿಯನ್ನು ಹೊತ್ತ ತೆಪ್ಪೋತ್ಸವ ವಿಷ್ಣು ಕಲ್ಯಾಣಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ತರುವಾಯ ಕಲ್ಯಾಣಿ ನಡುವಿನ ವಸಂತಮಂಟಪದ ಬಳಿ ಧಾವಿಸಿ, ಕ್ಷಣಕಾಲ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವ ಸಂಪನ್ನಗೊಳ್ಳುತ್ತದೆ.
ಈ ಸಂದರ್ಭದಲ್ಲಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸದಸ್ಯರಾದ ರವಿಶಂಕರ್, ರವೀಂದ್ರ, ಪ್ರಮೋದ್, ಅಡ್ಡೆಗಾರರು ಇನ್ನು ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತೆಪ್ಪೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಬಾಕ್ಸ್ ನ್ಯೂಸ್ : ಬೇಲೂರಿನಲ್ಲಿ ನಡೆದ ಚನ್ನಕೇಶವಸ್ವಾಮಿ ತೆಪ್ಪೋತ್ಸವ ಈ ಭಾರಿ ವಿಳಂಭವಾಗಿ ಆರಂಭವಾಯಿತು. ತೆಪ್ಪೋತ್ಸವ ಮುನ್ನ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿಯೇ ಪೂಜೆ ನಡೆಸಿ ತೆಪ್ಪ ಎರಡು ಸುತ್ತಿನ ಪ್ರದಕ್ಷಿಣೆ ಹಾಕಿದ ಬಳಿಕ ವಿದ್ಯುತ್ ಬಂತು. ಅಲ್ಲದೆ ತೆಪ್ಪದ ಮೇಲೆ ಸಾಕಷ್ಟು ಜನ ಕುಳಿತ ಕಾರಣದಿಂದ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.


