ಶ್ರವಣಬೆಳಗೊಳ: ಧರ್ಮವು ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುತ್ತದೆ ಮತ್ತು ಜೀವನದ ಧಾಮಿರ್ಮಿಕ ದೃಷ್ಟಿಯನ್ನು ಬೆಳೆಸುವುದರ ಮೂಲಕ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಹೀಗೆ, ಧರ್ಮವು ಒಂದು ಜ್ಯೋತಿಯಂತೆ ಪ್ರಜ್ವಲಿಸುವುದರ ಮೂಲಕ ಸಮಾಜವನ್ನು ಬೆಳಗುತ್ತದೆ, ಮನುಷ್ಯರ ಮನಸ್ಸು ಮತ್ತು ಹೃದಯಗಳನ್ನು ಪ್ರಕಾಶಿಸುತ್ತದೆ ಎಂದು ತುಮಕೂರಿನ ಅತ್ತಿಮಬ್ಬೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಬ್ರಹ್ಮಚಾರಿಣಿ ಜಲಜಾದೀದಿ ಹೇಳಿದರು.

ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ಶ್ರುತಕೇವಲಿ ಎಜುಕೇಶನ್ ಟ್ರಸ್ಟ್ ವತಿಯಿಂದ ಜೈನ ಬಡ ವಿದ್ಯಾರ್ಥಿಗಳಿಗಾಗಿ ಆರಂಭಗೊಂಡ ಕಾಳಲಾದೇವಿ ಕನ್ಯಾಶ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಒಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯ ಅಂಗವಾಗಿದೆ.

ಇದು ವ್ಯಕ್ತಿಯ ಜೀವನದ ಅತ್ಯುತ್ತಮ ದಿಕ್ಸೂಚಿಯಾಗಿದ್ದು, ಸಮಾಜವನ್ನು ಸುಧಾರಿಸುತ್ತದೆ. ನೀತಿ, ತತ್ತ್ವ, ಶ್ರದ್ಧೆ, ಆದರ್ಶಗಳ ಮೂಲಕ ಮನುಷ್ಯನ ಜೀವನವನ್ನು ನಿರ್ದಿಷ್ಟಗೊಳಿಸುತ್ತದೆ. ಧರ್ಮವು ಜ್ಯೋತಿ ಇದ್ದಂತೆ. ಯಾವಾಗಲೂ ಧರ್ಮಜ್ಯೋತಿ ಪ್ರಜ್ವಲಿಸುವಂತೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು.

ಧರ್ಮವು ಆತ್ಮನ ಅನುಭವವನ್ನು ಮತ್ತು ಆತ್ಮದ ಮೇಲಿನ ಆಳವಾದ ಅರಿವನ್ನು ಮೂಡಿಸುತ್ತದೆ. ಅದರ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ಒದಗಿಸುತ್ತದೆ. ಈ ರೀತಿಯ ಧರ್ಮದ ಅನುಸರಣೆ ಮತ ಧರ್ಮದ ಮುಖ್ಯ ಉದ್ದೇಶವು ಮನುಷ್ಯನ ಆಂತರಿಕ ಮೌಲ್ಯಗಳನ್ನು ಬೆಳೆಸುವುದು ಮತ್ತು ಅವನ ಜೀವನವನ್ನು ಉತ್ತಮವಾಗಿ ಮಾಡುವುದು. ಸಮಾಜದಲ್ಲಿ ಅನ್ಯೋನ್ಯ ಪ್ರೇಮ, ತಾಳ್ಮೆ, ಸಹಾನುಭೂತಿಗಳನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಕಿರಣ ರವೀಂದ್ರ ಪಾಟೀಲ್ ಮಾತನಾಡಿ, ನೈತಿಕ ಮತ್ತು ಸಂಸ್ಕಾರಯುತ ಶಿಕ್ಷಣ ಅತ್ಯಂತ ಮುಖ್ಯವಾದುದು. ಇದು ವಿದ್ಯಾರ್ಥಿಗಳಿಗೆ ಸಮಾಜಿಕ ಜವಾಬ್ದಾರಿ, ಮೌಲ್ವಿಕ ಮೌಲ್ಯಗಳನ್ನು ಕಲಿಸುವುದರ ಜತೆಗೆ ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಸಹಕಾರಿಯಾಗುತ್ತದೆ. ನೈತಿಕ ಮತ್ತು ಸಾಂಸ್ಕೃತಿಕ ಪರಿಚಯ ಮತ್ತು ಅವುಗಳ ಪ್ರಭಾವವನ್ನು ಅರಿಯುವ ಅವಕಾಶವನ್ನು ನೀಡುತ್ತದೆ. ಹೀಗೆ, ನೈತಿಕ ಮತ್ತು ಸಾಂಸ್ಕೃತಿಕ ಶಿಕ್ಷಣ ವಿದ್ಯಾರ್ಥಿಗಳ ನಿಜವಾದ ವಿಕಾಸಕ್ಕೆ ಕಾರಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತುಮಕೂರಿನ ಅತ್ತಿಮಬ್ಬೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಬ್ರಹ್ಮಚಾರಿಣಿ ಜಲಜಾದೀದಿ ಹಾಗೂ ಮಹಾರಾಷ್ಟ್ರದ ಕಿರಣ ರವೀಂದ್ರ ಪಾಟೀಲ್‌ರವರು ಆಶ್ರಮದ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಪ್ರತಿ ವರ್ಷ ತಲಾ 1 ಲಕ್ಷ ರೂಪಾಯಿಗಳನ್ನು ದಾನ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಟಿ.ಪ್ರಸನ್ನಕುಮಾರಿ, ಎಸ್.ಡಿ.ಜೆ.ಎಂ.ಐ.ಎಂ.ಸಿ. ಟ್ರಸ್ಟ್ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್‌ಕುಮಾರ್, ಶ್ರವಣಬೆಳಗೊಳ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಶ್ರುತಕೇವಲಿ ಎಜುಕೇಶನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಪುಟ್ಟರಾಜ್, ಕೂಷ್ಮಾಂಡಿನಿ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್‌ಕುಮಾರ್, ಚನ್ನರಾಯಪಟ್ಟಣ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಯಶೋಧ ನಾಗರಾಜ್, ಮೈಸೂರು ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಲತಾ ಸುದರ್ಶನ್, ಜೈನ ಮಂಡ್ಯ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ, ಬೆಳ್ಳೂರು ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಲಲಿತಾ ಪ್ರಸನ್ನಕುಮಾರಿ ಮುಂತಾದವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *