
ಹಾಸನ : ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಜೊತೆಗೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ನಾವು ಸೋಮವಾರದಿಂದಲೇ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ನಗರದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಹತಾಷವಾಗಿ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ನೆನ್ನೆ ಯಾರೂ ಕೂಡ ಊಹಿಸದ ರೀತಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯೊ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಜನರು ಶಾಪಹಾಕುತ್ತಿದ್ದಾರೆ. ಬರಗಾಲದ ಬೇಗೆಯಿಂದ ಇನ್ನೂ ಹೊರ ಬರಲು ಸಾದ್ಯವಾಗಿಲ್ಲ. ಈಗ ಪೆಟ್ರೋಲ್ ಡೀಸೆಲ್ ದರ ಹೆಚ್ಚು ಮಾಡಿದಾರೆ.
ಇದರಿಂದ ಸಾಗಣೆ ವೆಚ್ಚ ಜಾಸ್ತಿ ಆಗುತ್ತೆ, ತರಕಾರಿ ಬೆಲೆ ಜಾಸ್ತಿ ಆಗುತ್ತದೆ. ರೈತರಿಗೂ ಅನಾನುಕೂಲ ಆಗಲಿದೆ. ರೈತರ ಪಂಪ್ ಸೆಟ್ ಟ್ರ್ಯಾಕ್ಟರ್ ಬಳಸೋರಿಗೆ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗು ಹೊರೆ ಆಗುತ್ತೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಈ ರೀತಿಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊರ್ಳಳುತಿರುವುದರಿಂದ ಈ ಬಗ್ಗೆ ಖಂಡಿಸಲು ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಜೂನ್ ೧೭ ರಂದು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಮತ್ತೆ ಏನು ಮಾಡಬೇಕೆಂದು ನಾಳೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ.ನಿಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾದ್ಯವಾಗದೆ ಇಂತಹ ತೀರ್ಮಾನ ಮಾಡಿದ್ರೆ ಎಲ್ಲ ವರ್ಗದ ಜನರಿಗೆ ಅನಾನುಕೂಲ ಆಗಲಿದೆ.
ಈಗಲು ಕಾಲ ಮಿಂಚಿಲ್ಲ. ಪೆಟ್ರೋಲ್ ಮೇಲೆ ೩ ರೂ ಡೀಸಲ್ ಮೇಲೆ ೩.೫ ರೂ ಜಾಸ್ತಿ ಮಾಡಿದಿರಿ ಕೂಡಲೆ ಇದನ್ನ ಹಿಂಪಡೆಯಿರಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇವೆ. ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿದರೂ ಸಿಎಂ ಅವರು ತಮ್ಮ ಕೈಯನ್ನು ಕಟ್ಟಾಕಿಕೊಂಡಿದಾರೆ.
ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿರುವುದಿಲ್ಲ. ಯಾವುದೆ ಹೊಸ ಯೋಜನೆ ಕೊಡಲು ಸಾಧ್ಯವಾಗಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿಕೊಂಡು ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ ೭೦ ರಿಂದ ೮೦ ಸಾವಿರ ಕೋಟಿ ಸಾಲ ಮಾಡಿ ರಾಜ್ಯದ ಜನರಿಗೆ ಹೊರೆ ಹಾಕುತ್ತಿದ್ದಾರೆ ಎಂದು ದೂರಿದರು. ಇನ್ನೊಂದು ಕಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿ ಬರೆ ಎಳೆದಿದ್ದಾರೆ.
ಇದೆಲ್ಲವನ್ನು ನಾವು ಬೇರೆ ಬೇರೆ ಸಂಘಟನೆ ಮಾತಾಡಿ ಮುಂದಿನ ಹೋರಾಟ ತೀರ್ಮಾನ ಮಾಡುವುದಾಗಿ ಎಚ್ಚರಿಸಿದರು.
ತೆರಿಗೆ ಮೂಲಕ ಬಂದ ಹಣ ಅಭಿವೃದ್ಧಿಗೆ ಬಳಕೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ ಒಂದು ವರ್ಷದಲ್ಲಿ ಯಾವ ಅಭಿವೃದ್ಧಿ ಆಗಿದೆ? ಒಂದು ವರ್ಷದಲ್ಲಿ ಸಿಎಂ ಸೇರಿ ಯಾವುದೇ ಶಂಕುಸ್ಥಾಪನೆ ಮಾಡಿಲ್ಲ ಮತ್ತು ಅಭಿವೃದ್ಧಿ ಅಗಿರುವುದಿಲ್ಲ. ಹೊಸ ಯೋಜನೆಯನ್ನು ಇನ್ನು ಘೋಷಣೆ ಮಾಡಿರುವುದಿಲ್ಲ. ಯಾಕೆ ಮಾಡೋಕೆ ಸಾದ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದರು.
ರಾಜ್ಯದ ಜನರು ನಿಮ್ಮ ಮೇಲೆ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಆಗುತ್ತೆ ಎಂದು ಕನಸು ಕಾಣ್ತಾ ಇದಾರೆ. ಯಾವುದೇ ಶಾಸಕರ ಕ್ಷೇತ್ರದಲ್ಲಿ ಒಂದೇ ಒಂದು ಶಾಲಾ ಕೊಠಡಿ ಕಟ್ಟೋಕೆ ಸಾದ್ಯವಾಗಿಲ್ಲ. ಆಸ್ಪತ್ರೆ ರಸ್ತೆ ಮಾಡೋಕೆ ಸಾದ್ಯವಾಗ್ತಾ ಇಲ್ಲ. ಯಾವುದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ಈ ಸರ್ಕಾರ ಬಂದ ನಂತರ ಆಗಿದೆ. ಇನ್ನು ಇವರು ಗ್ಯಾರಂಟಿ ಗ್ಯಾರಂಟಿ ಎಂದು ಜನರ ಮೇಲೆ ಬರೆ ಎಳೆಯಲು ಹೊರಟಿದಾರೆ ಎಂದು ಬೇಸರವ್ಯಕ್ತಪಡಿಸಿದ ಅವರು, ಇದಕ್ಕೆ ನಾವು ಉಗ್ರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಕಾಂಗ್ರೆಸ್ ಸರ್ಕಾರ ಬಂದ ಎಲ್ಲಾ ಹಣವನ್ನು ಗ್ಯಾರಂಟಿಗೆ ಬಳಸುತ್ತಿದೆ. ಹಿಂದೆ ಎಸ್ಸಿಪಿ ಟಿಎಸ್ಪಿ ಹಣವನ್ನು ಸಂಪೂರ್ಣವಾಗಿ ಗ್ಯಾರಂಟಿಗೆ ವರ್ಗಾವಣೆ ಮಾಡಿದ್ರು. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಣ ಕೂಡ ಅದಕ್ಕೆ ಹೋಗುತ್ತದೆ. ಅದರಿಂದಲೂ ಇವರು ಅಭಿವೃದ್ಧಿ ಮಾಡಲು ಹೊರಟಿಲ್ಲ. ಇವರ ಆಡಳಿತ ವೈಖರಿ ಹೇಗಿದೆ ಎಂದರೆ ಅಭಿವೃದ್ಧಿ ಶೂನ್ಯವಾಗಿದೆ. ಅಭಿವೃದ್ಧಿ ಶೂನ್ಯ ರಾಜ್ಯ ಸರ್ಕಾರ ಜನರ ಮೇಲೆ ಬರೆ ಎಳೆಯಲು ಹೊರಟಿದೆ. ತಮ್ಮ ಗ್ಯಾರಂಟಿ ಗಾಗಿ ಪ್ರಾಪರ್ಟಿ ತೆರಿಗೆ ಹೆಚ್ಚಳ,ಎಲ್ಲವೂ ಈ ಸರ್ಕಾರ ಬಂದ ಮೇಲೆ ದುಬಾರಿ ಆಗಿದೆ. ಗ್ಯಾರಂಟಿ ಉಳಿಸಿಕೊಳ್ಳೋದು ನಂತರದ ಮಾತು ಆದರೆ ಅಭಿವೃದ್ಧಿ ಎಲ್ಲಿದೆ?ಯಾವುದೇ ಶಾಸಕರು ಏನೂ ಮಾಡಲು ಆಗುತ್ತಿಲ್ಲ ಎಂದರು.
ಹೊಸ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಯೋಜನೆ ಜಾರಿ ಮಾಡೋಕೆ ಆಗಿಲ್ಲ? ಎಂದು ಗುಡುಗಿದರು. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನ ವಿಚಾರವಾಗಿ ಮಾತನಾಡಿ, ಇಂತಹ ಹೇಯ ಕೃತ್ಯ ಮಾಡಿದವರು ಯಾರೇ ಆದರೂ ತಕ್ಕ ಶಿಕ್ಷೆ ಆಗಬೇಕು. ನಮ್ಮ ರಾಜ್ಯದಲ್ಲಿ ನಡೆಯುತ್ತಿರೊ ಘಟನೆ ನೋಡಿದರೆ ಯಾರೂ ತಲೆ ಎತ್ತಿ ಓಡಾಡಲು ಆಗದಂತಾಗಿದೆ. ಯಾರೇ ಪ್ರಭಾವಿ ಶಕ್ತಿ ಶಾಲಿ ಇದ್ದರೂ ಕೂಡ ಸೂಕ್ತ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಶಾಸಕ ಹೆಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಹೆಚ್.ಎನ್. ನಾಗೇಶ್, ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.
