ಹಾಸನ: ಕೆ.ಎ.ಐ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮ ಸ್ನೇಹಿ ಯೋಜನೆಯ ಫಲಾನುಭವಿಗಳಿಗೆ ಸ್ಥಳೀಯರಿಂದ ಅಡ್ಡಿ ಆರೋಪ ವ್ಯಕ್ತವಾಗಿದ್ದು ಗುರುವಾರ ಉದ್ದಿಮೆದಾರರು ಹಾಗೂ ಸ್ಥಳೀಯರ ನಡುವೆ ಮಾತನಿನ ಚಕಮಕಿ ನಡೆದಿದೆ.

ದಲಿತ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನಗರದ ಹೋರ ವಲಯದ ಕೌಶಿಕ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ದಲಿತ ಉದ್ದಿಮೆದಾರರಿಗೆ ನೀಡಿದ್ದ ಜಾಗದಲ್ಲಿ ಉದ್ದಿಮೆ ಆರಂಭ ಮಾಡಲು ಸ್ಥಳಿಯರು ಅಡ್ಡಿ ಪಡಿಸಿದ ಹಿನ್ನೆಲೆ ಪೊಲೀಸರ ಸಮ್ಮುಖದಲ್ಲಿ ಇಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೇರಿದೆ.

ಕೆ.ಎ.ಐ.ಡಿ.ಬಿ ಯಿಂದ ಎಸ್ಸಿ.ಎಸ್ಟಿ ಉದ್ದಿಮೆದಾರರಿಗೆ ಮಂಜೂರು ಮಾಡಿಕೊಟ್ಟಿದ್ದ ಸ್ಥಳದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದು ದಲಿತ ಉದ್ದಿಮೆದಾರರ ಆರೋಪ ಆದರೆ, ಗ್ರಾಮಕ್ಕೆ ಆಧಾರವಾಗಿರುವ ದನ, ಕರುಗಳಿಗೆ ಆಧಾರವಾಗಿರುವ ಗೋಮಾಳ ಜಾಗವನ್ನು ನಾವು ಬಿಟ್ಟು ಕೊಡುವುದಿಲ್ಲ ಎಂಬುದು ಸುತ್ತ ಮುತ್ತಲ ಗ್ರಾಮದ ಜನರ ವಾದವಾಗಿದೆ.

ಇನ್ನು ಪೊಲೀಸರ ಸಮ್ಮುಖದಲ್ಲಿ ದಲಿತ ಉದ್ದಿಮೆದಾರರು ಜೆಸಿಬಿ ಮೂಲಕ ಕೆಲಸ ಮಾಡಲು ಮುಂದಾದಾಗ ಸ್ಥಳೀಯರು ಅದನ್ನು ತಡೆದು, ಕೆಲಸ ಮಾಡಲು ಬಿಡದೆ ಅಡ್ಡಿ ಪಡಿಸಿದ್ದಾರೆ.

ಬಳಿಕ ಪೋಲೀಸರ ಸಮ್ಮುಖದಲ್ಲಿ ಪ್ರಕರಣ ಠಾಣೆ ಮೆಟ್ಟಿಲೇರಿದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವೇಳೆ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, 2013-18 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ದಲಿತರನ್ನು ಉದ್ಯಮಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಉದ್ಯಮ ಸ್ನೇಹಿ ಎಂಬ ಕ್ರಾಂತಿಕಾರಿ ಯೋಜನೆ ಅಡಿಯಲ್ಲಿ ಉದ್ಯೋಗಿಯಾಗಿ ಉದ್ಯೋಗ ನೀಡು ಎಂಬ ಯೋಜನೆ ಜಾರಿಗೆ ತಂದು ಎಸ್ಸಿ.ಎಸ್ಟಿ ಸಮುದಾಯದ ಜನರಿಗೆ ಕೆ.ಎ.ಐ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿ ಮೀಸಲಾತಿ ನೀಡಿ, ಶೇಕಡಾ 50 ರಷ್ಟು ಸಬ್ಸಿಡಿ ನೀಡಿ ಜೊತೆಗೆ ಲೋನ್ ಮೂಲಕ ಹಣ ನೀಡಿ ಅವರನ್ನು ಆರ್ಥಿಕವಾಗಿ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಜಾರಿಯಾಗಿದೆ.

ಈ ಯೋಜನೆ ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಅನೇಕರು 2016-17 ರಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ 2018 ರಲ್ಲಿ ಹಾಸನ ಕೈಗಾರಿಕಾ ಪ್ರದೇಶದ ಉಪ ಬಡಾವಣೆ 4ರಲ್ಲಿ ಜಾಗ ಮಂಜೂರಾಗಿದೆ, ಜೊತೆಗೆ ಸದರಿ ಜಾಗಕ್ಕೆ ಸಂಪೂರ್ಣ ಹಣ ಪಾವತಿ ಮಾಡಿದ್ದರು ಸ್ಥಳೀಯರು ಅಡ್ಡಿ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ವರೆಗೆ ಈ ಜಾಗದಲ್ಲಿ ಕೆಲಸ ಆರಂಭಿಸಲು ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಈ ಹಿಂದೆ ಕೆ.ಎ.ಐ.ಡಿ.ಬಿ ಇಲಾಖೆ ಅಧಿಕಾರಿಗಳು ಕಾನೂನು ಬದ್ದವಾಗಿ ಜಾಗವನ್ನು ನಮ್ಮ ಹೆಸರಿಗೆ ಮಂಜೂರು ಮಾಡಿ ಕೊಟ್ಟಿದ್ದರು ಕಳೆದ ನಾಲ್ಕು ವರ್ಷಗಳಿಂದ ಲಕ್ಷಾಂತರ ರೂಪಾಯಿಗಳ ಹಣವನ್ನು ಕೆ.ಎ.ಐ.ಡಿ.ಬಿ ಗೆ ಪಾವತಿಸಿ ಬಡ್ಡಿಯನ್ನು ಕಟ್ಟಲು ಆಗದೆ ಕಂಗಾಲಾಗಿದ್ದೇವೆ, ಕೂಡಲೇ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ನಮ್ಮ ಸಮಸ್ಯೆ ಬಗೆ ಹರಿಸಬೇಕು ಎಂದು ಮನವಿ ಮಾಡಿದರು.

ಜಾಗ ಸಿಗುವವರೆಗೂ ನಿರಂತರ ಹೋರಾಟ

ಕೆ.ಎ.ಐ.ಡಿ.ಬಿ ನಿಯಮಾನುಸಾರ ಕಾನೂನು ಬದ್ಧವಾಗಿ ಜಾಗ ನಮ್ಮ ಹೆಸರಿನಲ್ಲಿ ಇದ್ದರು ಕಳೆದ ಐದಾರು ವರ್ಷಗಳಿಂದ ಸ್ಥಳೀಯರು ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ಈ ಬಗ್ಗೆ ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ನಮ್ಮ ನ್ಯಾಯಸಮ್ಮತ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ.ಈಗಾಗಲೆ ನಾವು ಇದನ್ನೇ ನಂಬಿಕೊಂಡು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದು, ನಮ್ಮ ಹಕ್ಕನ್ನು ನಾವು ಬಿಡುವುಲ್ಲ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *