
ಹಾಸನ: ಜಿಲ್ಲೆಯ ಅನೇಕ ಕಡೆ ಅಧಿಕಾರಿಗಳ ಕರ್ತವ್ಯದಲ್ಲಿ ಅನೇಕ ಸಮಸ್ಯೆಗಳು ಕೇಳಿ ಬಂದಿದ್ದು, ಇದಕ್ಕೆ ಅಧಿಕಾರಿಗಳ ವರ್ಗಾವಣೆಯೇ ಮಾನದಂಢವಲ್ಲ. ಯಾವುದೇ ಮಟ್ಟದ ಅಧಿಕಾರಿಗಳಾಗಿರಬಹುದು, ಕಛೇರಿಗೆ ಯಾರೆ ಸಾಮಾನ್ಯ ಜನರು ಬಂದರೇ ಪಕ್ಷತೀತವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ಕೊಡಲಾಗಿದೆ ಎಂದು ನೂತನ ಸಂಸದ ಶ್ರೇಯಸ್ ಎಂ. ಪಟೇಲ್ ಎಚ್ಚರಿಸಿದರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ನೂತನ ಸಂಸದರಾಗಿ ಆಯ್ಕೆಗೊಂಡಿರುವ ಯುವಕರ ಕಣ್ಮಣಿ ಶ್ರೇಯಸ್ ಎಂ. ಪಟೇಲ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಎಸ್.ಟಿ. ಬಳಗದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದರು, ಎಲ್ಲಾ ಸೇರಿ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದು, ಕಳೆದ ೨೫ ವರ್ಷಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೇ ಈಗ ನಮಗೆ ಜವಬ್ಧಾರಿ ಹೆಚ್ಚಿದ್ದು, ಜೊತೆಗೆ ಸವಾಲನ್ನು ಕೂಡ ಹೆಚ್ಚಾಗಿದೆ.
ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು, ಎಲ್ಲಾರ ಸಲಹೆ ಸಹಕಾರ ನನಗೆ ಖಂಡಿತ ಬೇಕಾಗಿದೆ. ಪರಿಶಿಷ್ಟ ಜಾತಿ ಪಂಗಡದಿಂದ ನನಗೆ ಅಭಿನಂದನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಚುನಾವಣೆ ವೇಳೆ ಜಾತ್ಯಾತೀತವಾಗಿ, ಪಕ್ಷತೀತವಾಗಿ ಈ ಬಾರಿ ಮತವನ್ನು ಹಾಕಿದ್ದಾರೆ.
ಒಗ್ಗಟ್ಟಿನ ಪರಿಶ್ರಮ, ನಮ್ಮ ಕಾರ್ಯಕರ್ತರು ಬೂತ್ ಮಟ್ಟದಿಂದ ಹಿಡಿದು ಪ್ರತಿ ತಾಲೂಕು ಮುಖಂಡರು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿರುವುದೇ ಗೆಲುವು ಬಂದಿರುವುದು ಉತ್ತರ ಎಂದು ಹೇಳಬಹುದು ಎಂದರು.
ಈ ಗೆಲುವು ಸಿಕ್ಕಿದೆ ಎಂದು ಮೈ ಮರೆಯುವುದು ಬೇಡ. ವರ್ಷದ ೩೬೫ ದಿನಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ವಾರದ ಏಳು ದಿನಗಳಲ್ಲಿ ಎರಡು ದಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುತ್ತೇನೆ.
೧೫ ದಿವಸಕ್ಕಾದರೂ ಪಕ್ಷದ ಕಾರ್ಯಕರ್ತರ ಸಭೆ, ಸಾರ್ವಜನಿಕರ ಸಭೆಯನ್ನು ಜವಬ್ಧಾರಿಯುತವಾಗಿ ಮಾಡಲಾಗುವುದು. ಕಾರ್ಯಕರ್ತರ ಕಷ್ಟ ನೋವುಗಳನ್ನು ಕೂಡ ನೋಡಬೇಕಾಗುತ್ತದೆ. ನಾನು ಕಾರ್ಯಕರ್ತನಾಗಿದಕ್ಕೆ ಇಂದು ಸಂಸದನಾಗಿದ್ದೇನೆ. ಕಾರ್ಯಕರ್ತರೇ ನಮಗೆ ಹುಲಿಯಾಳುಗಳಾಗಿದ್ದು, ಯಾವುದೇ ಕೆಟ್ಟ ಹೆಸರು ಬಾರಾದಾಗೆ ನಿಷ್ಟೆಯಿಂದ ಕೆಲಸ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.
ಅನೇಕ ಕಡೆ ಅಧಿಕಾರಿಗಳ ಕರ್ತವ್ಯದಲ್ಲಿ ಸಮಸ್ಯೆಗಳಿದ್ದು, ಇದಕ್ಕೆ ಅಧಿಕಾರಿಗಳ ವರ್ಗಾವಣೆಯೇ ಮಾನದಂಢವಲ್ಲ. ಯಾವುದೇ ಮಟ್ಟದ ಅಧಿಕಾರಿಗಳಾಗಿರಬಹುದು, ಕಛೇರಿಗೆ ಯಾರೆ ಬಂದರೂ ಪಕ್ಷತೀತವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ಕೊಟ್ಟಿದ್ದು, ಯಾವ ಅಧಿಕಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ ಎಂದು ಇದೆ ವೇಳೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು. ಪಕ್ಷದಲ್ಲೆ ನಿಷ್ಠವಂತ ಕಾರ್ಯಕರ್ತರನ್ನು ಗುರುತಿಸುತ್ತಿಲ್ಲ. ನಾಮ ನಿರ್ದೇಶನ ಕೂಡ ಆಗಿರುವುದಿಲ್ಲ. ಬಗ್ಗೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ನಿಷ್ಠವಂತ ಕಾರ್ಯಕತರನ್ನು ಗುರುತಿಸುವ ಕೆಲಸ ಮಾಡಲಾಗುವುದು ಎಂದು ಭವಿಷ್ಯ ನುಡಿದರು.
ನಾನು ಪುಟ್ಟಸ್ವಾಮಿ ಮೊಮ್ಮಗ ಆಗಿರಬಹುದು ಆದರೇ ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತ ಹೋರಾಟ ಮಾಡಿಕೊಂಡು ಬಂದಿರುವುದಕ್ಕೆ ಪಕ್ಷ ಗುರುತಿಸಿ ಸಂಸದನಾಗಿದ್ದೇನೆ. ತಾಳ್ಮೆ ಇದ್ದರೇ ಒಂದಲ್ಲ ಒಂದು ದಿವಸ ಪಕ್ಷ ಗುರುತಿಸುತ್ತದೆ ಎಂದು ಭರವಸೆ ನುಡಿದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಯಾರು ಮೈ ಮರೆಯುವುದ ಬೇಡ. ಮುಂದೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬರಲಿದ್ದು, ಈಗಾಗಲೇ ಜೆಡಿಎಸ್ ಬಿಜೆಪಿ ಒಂದಾಗಿದ್ದು, ಮನದಲ್ಲಿಟ್ಟುಕೊಂಡು ನಾವು ಮುಂದಿನ ದಿನಗಳಲ್ಲಿ ಕಾರ್ಯಪ್ರವೃತನಾಗಬೇಕು. ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಮಾಡಬೇಕು. ೨೫ ಕಡೆ ನಾವು ಗೆಲ್ಲಲೆ ಬೇಕು. ಪಕ್ಷದ ಗೌರವ ಕಾಪಾಡಬೇಕು. ೮ತಾಲೂಕುಗಳ ಕಡೆ ನಾವು ಗಮನ ಕೊಟ್ಟು ಇದೆ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಅತೀ ಶೀಘ್ರದಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಏರ್ಪಡಿಸಿ ಶ್ರೇಯಸ್ ಪಟೇಲ್ ಅವರನ್ನು ಸನ್ಮಾನಿಸಿ ಅಭಿನಂದಿಸುವ ಕೆಲಸ ಮಾಡಲಾಗುವುದು. ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡಲು ಅವರಿಗೆ ಉತ್ತೇಜಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ./ಎಸ್.ಟಿ. ಬಳಗದಿಂದ ನೂತನ ಸಂಸದ ಶ್ರೇಯಸ್ ಎಂ. ಪಟೇಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೆ ಮೊದಲು ನೂತನ ಸಂಸದರು ಕಾಂಗ್ರೆಸ್ ಕಛೇರಿ ಮುಂದೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಇದೆ ವೇಳೆ ಕಾಂಗ್ರೆಸ್ ಎಸ್.ಸಿ./ಎಸ್.ಟಿ. ಘಟಕದ ಅಧ್ಯಕ್ಷ ಮಲ್ಲಿಗೆವಾಳ್ ದೇವಪ್ಪ, ಮುಖಂಡರಾದ ರಾಮಚಂದ್ರ, ಮಂಜುನಾಥ್ ಶರ್ಮ, ಗಾಯಿತ್ರಿ, ದಾವುದ್, ಲಕ್ಷ್ಮಣ್, ರಂಜಿತ್ ಗೊರೂರು, ದೇವರಾಜು, ಪ್ರಕಾಶ್, ಮಂಡಿಗನಹಳ್ಳಿ ಚಂದ್ರು, ನಾಯಕರಹಳ್ಳಿ ಅಶೋಕ್, ಪ್ರಕಾಶ್ ಗೌಡಗೆರೆ, ಜಿ.ಓ. ಮಹಂತಪ್ಪ, ವೆಂಕಟೇಶ್, ಅಮ್ಜಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



