
ಚನ್ನರಾಯಪಟ್ಟಣ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರದಂದು ನಡೆದ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ನಿರ್ದೇಶಕಿ, ಉತ್ತೇನಹಳ್ಳಿ ಗ್ರಾಮದ ಶ್ರೀಮತಿ ಚಂದ್ರಕಲಾ ಮಂಜೇಗೌಡರವರು ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾದ ಕೆ.ಎಂ. ನಂಜಪ್ಪರವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರದಂದು ಚುನಾವಣೆ ನಿಗದಿಗೊಳಿಸಿತ್ತು.
ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕಿ ಉತ್ತೇನಹಳ್ಳಿ ಗ್ರಾಮದ ಚಂದ್ರಕಲಾ ಮಂಜೇಗೌಡ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಸುನೀಲ್‌ರವರು ಚಂದ್ರಕಲಾ ಮಂಜೇಗೌಡರವರ ಅಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷರನ್ನು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕರಾದ ಸಿ.ಎನ್.ಪುಟ್ಟಸ್ವಾಮೀಗೌಡ, ಉಪಾಧ್ಯಕ್ಷ ಎ.ಎಸ್.ಕೃಷ್ಣೇಗೌಡ ಉರುಪ್ ಸ್ವಾಮಿ ಸೇರಿದಂತೆ ಎಲ್ಲ ನಿರ್ದೇಶಕರು, ಅವರ ಬೆಂಬಲಿಗರು, ಹಿತೈಷಿಗಳು ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ಚಂದ್ರಕಲಾ ಮಂಜೇಗೌಡ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರು ಎಲ್ಲರೂ ಸಂಘವನ್ನು ಅಭಿವೃದ್ಧಿಯತ್ತ ಮುನ್ನೆಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಅರ್ಥಿಕ ಸಂಪನ್ಮೂಲ ಕ್ರೋಡಿಕರಣದ ಜೊತೆಗೆ ರೈತರಿಗೆ ಹತ್ತಿರವಾದ ಕಾರ್ಯವನ್ನು ಮಾಡುವ ಮೂಲಕ ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಕರುಣಿಸಿರುವ ಕ್ಷೇತ್ರದ ಶಾಸಕ ಸಿ.ಎನ್ .ಬಾಲಕೃಷ್ಣರವರಿಗೆ ಕೀರ್ತಿ ತರುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿದ ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೆಶಕರಾದ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿ, ಇಲ್ಲಿನ ಟಿಎಪಿಸಿಎಂಎಸ್ ಕಳೆದ 10ವರ್ಷದಿಂದ ಅಭಿವೃದ್ದಿಯತ್ತ ಸಾಗುತ್ತಿದ್ದು, 1.5 ಕೋಟಿ ಮೂಲ ಬಂಡವಾಳವನ್ನು ಹೊಂದಿದೆ. ವಾಣಿಜ್ಯ ಮಳಿಗೆಗಳಿಂದ ಪ್ರತಿ ತಿಂಗಳು 1.5 ಲಕ್ಷ ರೂ. ಬಾಡಿಗೆ ಹಣ ಕ್ರೋಡಿಕರಣವಾಗುತ್ತಿದೆ. ಇಡೀ ಜಿಲ್ಲೆಯಲ್ಲಿಯೇ ಗೊಬ್ಬರ ಮಾರಾಟದಲ್ಲಿ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 7ವರ್ಷಗಳ ಅವಧಿಯಲ್ಲಿ 14 ಕೋಟಿಗೂ ಹೆಚ್ಚಿನ ವಹಿವಾಟು ನಡೆಸಲಾಗಿದೆ.
ರಾಜ್ಯ ಮಾರಾಟ ಮಹಾಮಂಡಳದಿಂದ 2 ಬಾರಿ ಅತ್ಯುತ್ತಮ ಸಂಘವೆಂದು ಪ್ರಶಸ್ತಿ ಲಭಿಸಿದೆ ಎಂದ ಅವರು, ಬಹು ಉದ್ದೇಶಿತ ಪೇಟ್ರೋಲ್ ಬಂಕ್ ಸ್ಥಾಪನೆ ಗುರಿ ಹೊಂದಿರುವ ಸಂಘಕ್ಕೆ ಸದ್ಯ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಜಾಗದ ವಿಚಾರದಲ್ಲಿ ಇರುವ ಸಣ್ಣ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್‌ನ ಉಪಾಧ್ಯಕ್ಷರಾದ ಎ.ಎಸ್.ಕೃಷ್ಣೇಗೌಡ ಉರುಪ್ ಸ್ವಾಮಿಗೌಡ , ನಿರ್ದೇಶರುಗಳಾದ ವಿ.ಎನ್.ರಾಜಣ್ಣ, ಬಿ.ಎಚ್.ಶಿವಣ್ಣ, ಕೆ.ಎಂ. ನಂಜಪ್ಪ, ಪರಮ ಎನ್.ಕೃಷ್ಣೇಗೌಡ, ರಮೇಶ್ ಕುಂಬಾರಹಳ್ಳಿ, ಎಂ.ಆರ್.ಅನಿಲ್‌ಕುಮಾರ್, ಸಿ.ಜಿ.ಜಗದೀಶ್, ಬಿ.ಕೆ.ಮನು, ಬಿ.ವಿ.ಮುನಿಸ್ವಾಮಿ, ಯೋಗೇಶ್, ಯು.ವಿ.ಮಂಜುಳಾ, ಸೇರಿ ಮುಖಂಡರಾದ ಉತ್ತೇನಹಳ್ಳಿ ಮಂಜೇಗೌಡ, ಹಡೇನಹಳ್ಳಿ ಲೋಕೇಶ್, ಶ್ರವಣಬೆಳಗೊಳ ರಾಘವೇಂದ್ರ, ದೊಡ್ಡೇಗೌಡ, ಪ್ರಸನ್ನ ಕುಮಾರ್, ವಡ್ಡರಹಳ್ಳಿ ಗಣೇಶ್ ಗೌಡ, ಸಾಗರ್ ಗೌಡ , ಸಿಂಹಾದ್ರಿ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ಸಿ.ಎಚ್.ಮಂಜುಳಾ, ಸಿಬ್ಬಂದಿಗಳಾದ ಸಂಧ್ಯಾ, ಜಯಪಾಲ್, ಬಿ.ಪಿ.ಸತೀಶ್, ಎಸ್.ಎನ್.ಹರೀಶ್, ಜಯಸೂರ್ಯ, ತ್ರಿವೇಣಿ ಸೇರಿ ಇತರರು ಅಧ್ಯಕ್ಷರನ್ನು ಅಭಿನಂದಿಸಿದರು.


