
ಬೇಲೂರು.ಜುಲೈ.೬ ;-ಮಾನವ ಯಾವಾಗಲೂ ಸುಖಾಪೇಕ್ಷಿ, ಸಂತೃಪ್ತಿ ಸಮೃದ್ಧಿಗಾಗಿ ಜೀವನ ಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬಿಕ್ಕೋಡು ಸಮೀಪದ ಮುಚ್ಚಿನಮನೆ ಗ್ರಾಮದ ನೂತನ ಶ್ರೀ ಶಿವಲಿಂಗೇಶ್ವರಸ್ವಾಮಿ ಪ್ರತಿಷ್ಠಾ ಪ್ರಥಮ ಮಂಡಲೋತ್ಸವ ಅಂಗವಾಗಿ ಜರುಗಿದ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು ಇತ್ತೀಚಿನ ದಿನದಲ್ಲಿ ಮಾನವ ಸಂಪತ್ತಿಗೆ ಹೆಚ್ಚಿನ ಮನ್ನಣೆ ನೀಡುತ್ತಿರುವ ಕಾರಣದಿಂದಲೇ ಪ್ರತಿಯೊಬ್ಬರದಲ್ಲಿ ಸಂಬಂಧಗಳು ಉಳಿಯುತ್ತಿಲ್ಲ, ಹಣ, ಅಧಿಕಾರ ಹಿಂದೆ ಹೊರಟ ಮಾನವ ಧರ್ಮಪ್ರಜ್ಷೆ, ರಾಷ್ಟ್ರ ಭಕ್ತಿಯಿಂದ ದೂರವಾಗುತ್ತಿದೆ. ಬೆಳೆಯುವ ಯುವ ಮನಸ್ಸಿನಲ್ಲಿ ವೈಚಾರಿಕತೆ ಇರಲಿ, ಆದರೆ ಇದರ ನೆಪದಲ್ಲಿ ನಾಸ್ತಿಕ ಮನೋಭಾವನೆ ಬೆಳೆಯಬಾರದು, ಇದ್ದರಿಂದ ನಾಗರೀಕತೆಯ ಸಮಾಜದಲ್ಲಿ ಅನಾಗರೀಕ ಕೃತ್ಯಗಳು ಹೆಚ್ಚುತ್ತದೆ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂಹಿತೆಯಲ್ಲಿ ಸಕಲ ಜನಾಂಗಕ್ಕೂ ಅವಶ್ಯಕವಾಗಿರುವ ದಶವಿಧ ಧರ್ಮ ಸೂತ್ರವನ್ನು ಬೋಧಿಸಿದ್ದಾರೆ.
ವಿಶ್ವದಲ್ಲಿ ಅಸಂಖ್ಯಾತ ಧರ್ಮಗಳಿದ್ದು, ಅಯಾ ಧರ್ಮಗಳ ತಮ್ಮ ತಮ್ಮ ಧರ್ಮಸಾರದ ಬಗ್ಗೆ ಹೇಳುತ್ತಾರೆ ಆದರೆ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶವನ್ನು ನೀಡಿದ್ದು ಅದು ರಂಭಾಪುರಿ ಪೀಠ ಎಂಬುವುದನ್ನು ಯಾರು ಕೂಡ ಮರೆಯಬಾರದು. ಪ್ರವಾಸಿತಾಣ ಬೇಲೂರಿನಲ್ಲಿ ಕಳೆದ ಎರಡು ವರ್ಷ ಹಿಂದೆ ಐತಿಹಾಸಿನ ರಂಭಾಪುರಿ ದಸರಾ ಕಾರ್ಯಕ್ರಮ ನಡೆಸಿದ್ದು ಜಗದ್ಗುರುಗಳಿಗೆ ಸಂತೋಷ ತಂದಿದೆ. ಹಾಗೇಯೆ ಮುಚ್ಚಿಮನೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿವಲಿಂಗೇಶ್ವರಸ್ವಾಮಿ ಪ್ರತಿಷ್ಠಾಪನೆ ಪ್ರಥಮ ಮಂಡಲೋತ್ಸವದಲ್ಲಿ ಜಗದ್ಗುರುಗಳನ್ನು ಕರೆಸಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಿ, ಧರ್ಮ ಸಂಸ್ಕಾರ ಜಾಗೃತಿ ಸಮಾರಂಭ ನಡೆಸಿದ್ದು ನಿಜಕ್ಕೂ ಸಂತಸವಾಗಿದೆ ಎಂದರು.
ಅಲೂರು ತಾಲ್ಲೂಕು ಕಾರ್ಜುವಳ್ಳಿ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಇತ್ತೀಚಿನ ದಿನದಲ್ಲಿ ರಂಭಾಪುರಿ ಪ್ರಸ್ತುತ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮಗಳು ಅಲೂರು-ಬೇಲೂರಿನಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಭಕ್ತರ ಸಂಸ್ಕಾರವನ್ನು ತೋರಿಸುತ್ತದೆ. ಗುರುವಿನ ಅನುಗ್ರಹದಿಂದ ಮಾತ್ರ ಮಾನವ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗುರುವಿನ ಪಾದಸ್ಪರ್ಶದಿಂದ ನಮ್ಮ ಬದುಕು ಪಾವನವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು ಧರ್ಮ ಸಂಸ್ಕೃತಿ ಗುರು ಪರಂಪರೆಯ ಬಗ್ಗೆ ಬೋಧಿಸಿದರು.
ಉಳಿದಂತೆ ಕಾರ್ಯಕ್ರಮದಲ್ಲಿ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್, ಗುರುಸ್ವಾಮಿ ಸೇರಿದ ಧರ್ಮ ಜಾಗೃತಿ ಸಮಾರಂಭಕ್ಕೂ ಮುನ್ನ ಬಿಕ್ಕೋಡು ಗ್ರಾಮ ಪ್ರಮುಖ ರಸ್ತೆಯಲ್ಲಿ ರಂಭಾಪುರಿ ಜಗದ್ಗುರುಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಅತ್ಯಂತ ವೈಭವನದಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಉತ್ಸವದಿಂದ ಪಾಲ್ಗೊಂಡು ವಿಶೇಷ ಮೆರಗು ತಂದರು ಬಂದ ಸರ್ವ ಭಕ್ತರಿಗೂ ದಾಸೋಹ ನಡೆಸಲಾಯಿತು.



