
ಹಾಸನ: ಮೀನು ವ್ಯಾಪಾರ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ ಬೀದಿ ಬದಿ ವ್ಯಾಪಾರ ಮಾಡುವ ಮೀನು ವ್ಯಾಪಾರಸ್ತರು ಶ್ರೀ ಗಂಗಾಪರಮೇಶ್ವರಿ ಗಂಗಾಮತಸ್ಥರ ಮಹಿಳಾ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ಮೀನು ವ್ಯಾಪಾರಸ್ತರಾದ ಪದ್ಮ ಶಿವನಂಜು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಗಂಗಾಮತಕ್ಕೆ (ಬೆಸ್ತರು) ಸೇರಿದ ನೂರಾರು ಕುಟುಂಬಗಳು ಕೆರೆ ಭೇಟೆ ಆಡಿ ಮೀನು ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುತ್ತವೆ. ಕೆರೆ ಭೇಟೆ ಮಾಡಿದ ಮೀನುಗಳನ್ನು ಹಾಸನ ನಗರಕ್ಕೆ ತಂದು ಬೀದಿ ಬದಿಯಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುತ್ತೇವೆ ಎಂದರು.
ಆದರೆ ಇತ್ತೀಚೆಗೆ ಕೆಲವು ಅಧಿಕಾರಿಗಳು ಬೀದಿ ಬದಿ ಮಾರಾಟ ಮಾಡುತ್ತಿದ್ದ ನಮ್ಮನ್ನು ಎತ್ತಂಗಡಿ ಮಾಡುವಂತೆ ಪೀಡಿಸುತ್ತಿದ್ದು, ಮೀನು ಮಾರುಕಟ್ಟೆಗೆ ಹೋಗಿ ಎಂದು ಹೇಳಿದ್ದು, ಆದರೇ ಅಲ್ಲಿ ನಾಲ್ಕು ಜನ ಕುಳಿತು ವ್ಯಾಪಾರ ಮಾಡಲು ಸ್ಥಳ ಇರುವುದಿಲ್ಲ. ನಮಗೆ ಬೇರೆ ಕಡೆಯಾದರೂ ಅವಕಾಶ ಕೊಡಬೇಕೆಂದರು.
ನಮಗೆ ವ್ಯಾಪಾರ ಮಾಡಲು ಸ್ಥಳವಿಲ್ಲದೆ ಹಾಗೂ ಮೀನು ಮಾರಾಟ ಮಾಡಿ ಜೀವನ ನಡೆಸಲು ಸಾಧ್ಯವಿಲ್ಲದೆ ನಮ್ಮ ಕುಟುಂಬಗಳು ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತವೆ. ನಮ್ಮ ಮಕ್ಕಳಿಗೆ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಮಕ್ಕಳನ್ನು ಶಾಲಾ ಕಾಲೇಜಿಗೆ ಶುಲ್ಕವನ್ನು ಪಾವತಿ ಮಾಡಿ ಕಾಲೇಜಿಗೆ ಕಳುಹಿಸಲು ಸಾಧ್ಯವಾಗದೇ ತುಂಬಾ ಕಷ್ಟವಾಗಿರುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಬಗ್ಗೆ ಗಮನಹರಿಸಿ ನಮ್ಮಗಳಿಗೆ ಹಾಸನದ ಬೀದಿ ಬದಿಗಳಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟು ನಮ್ಮ ಕುಟುಂಬಕ್ಕೆ ಸಹಾಯ ಮಾಡಿಕೊಡಬೇಕಾಗಿ ವಿನಂತಿಸಿಕೊಂಡರು.
ಪ್ರತಿಭಟನೆಯಲ್ಲಿ ಸಂಘದ ಜಯಮ್ಮ, ಗಣೇಶ್, ಪ್ರವೀಣ್, ಶಿವಾನಂದ್, ರೂಪ, ಸುಭದ್ರ, ಆಶಾ, ಚಂದ್ರಕಲಾ, ದೇವರಾಜು, ನಾಗಮಣಿ, ಮಂಜು, ರತ್ನ ಮಂಜೂಳ, ಮುರುಳಿ, ರಾಜಣ್ಣ, ಚಂಧ್ರಶೇಖರ್, ಮಧು ಇತರರು ಉಪಸ್ಥಿತರಿದ್ದರು.
