ಸಕಲೇಶಪುರ : ತಾಲ್ಲೂಕಿನಾದ್ಯಂತ ವರುಣಾರ್ಭಟದ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಭೂ ಕುಸಿತ ಹಾಗೂ ಮನೆಗಳ ಗೋಡೆ ಕುಸಿತ ಉಂಟಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ.

ಇನ್ನು ಇಂದು ಮುಂಜಾನೆಯಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಕೊಲ್ಲಹಳ್ಳಿಯ ಬಳಿ 25 ಅಡ್ಡಿಯಷ್ಟು ಎತ್ತರಕ್ಕೆ ಮಣ್ಣು ಹಾಕಿ ನಿರ್ಮಾಣ ಮಾಡಿದ್ದ ರಾಷ್ಟ್ರೀಯ ಹೆದ್ದಾರಿ 75 ರ ತಡೆಗೋಡೆ ಸುಮಾರು 500 ಮೀಟರ್ ನಷ್ಟು ಕುಸಿದು ಬಿದ್ದ ಕಾರಣ ಏಕ ಮುಖ ಸಂಚಾರಕ್ಕೆ ಅನುವು ಮಾಡಲಾಗಿದೆ

ಇದೇ ರೀತಿ ಮಳೆ ಮುಂದುವರೆದರೆ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಏಕ ಮುಖ ಸಂಚಾರದಿಂದ ವಾಹನ ಸವಾರರಿಗೆ ಆತಂಕ ಎದುರಾಗಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಕಲೇಶಪುರದ ಹೇಮಾವತಿ ಹೊಳೆಯ ದಡದಲ್ಲಿ ಇರುವ ಹೊಳೆ ಮಲ್ಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಊಟದ ಹಾಲ್ ನ ಮೇಲೆ ಒಣಗಿದ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಹಾಲ್ ನ ಮೇಲ್ಚಾವಣಿ ಹಾನಿ ಗೊಂಡಿದೆ ಎಂದು ದೇವಸ್ಥಾನದ ಅರ್ಚಕರು ಹಾಗು ಸಿಬ್ಬಂದಿ ವರ್ಗ ತಿಳಿಸಿದ್ದಾರೆ.

ಇನ್ನೂ ಕುಶಾಲನಗರ ಬಡಾವಣೆಯ ಬಿಲಾಲ್ ಮಸೀದಿಯ ಬಳಿ ಇರುವ ಖಲೀಲ್ ಎಂಬುವರ ಮನೆ ಅತಿಯಾದ ಮಳೆಗೆ ಬಿದ್ದು ಹೋಗಿದ್ದು ಇದೆ ರೀತಿ ಮಳೆ ಮುಂದುವರೆದರೆ ಸಂಪೂರ್ಣ ನೆಲಸಮವಾಗುವ ಭೀತಿ ಎದುರಾಗಿದ್ದು ಕೂಡಲೇ ಪುರಸಭೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸಂತ್ರಸ್ತ ಖಲೀಲ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.

ತಾಲೂಕಿನ ಮಾರನಹಳ್ಳಿ ಗ್ರಾಮಾಂತರ ಪೊಲೀಸ್ ಚೆಕ್ ಪೋಸ್ಟ್‌ ಮುಂಭಾಗದಲ್ಲಿನ ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದ್ದು ಗ್ರಾಮಕ್ಕೆ ಹೋಗುವ ಜನ ಪರದಾಡುವಂತಾಗಿದೆ ಅತಿಯಾದ ಮಳೆಗೆ ಸೇತುವೆ ಪಕ್ಕದಲ್ಲಿ ಹಾಕಲಾಗಿದ್ದ ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದ್ದು ಇದಕ್ಕೆಲ್ಲ ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಇನ್ನೂ ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಂಕ್ಲಾಪುರ ಮಠದ ಮಾರ್ಗವಾಗಿ ಹೋಗುವ ಹೆಗ್ಗದ್ದೆಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದ್ದು ಸೇತುವೆಯ ಪಕ್ಕದಲ್ಲಿ ಹಕಲಾಗಿದ್ದ ಮಣ್ಣುಅತಿಯಾದ ಮಳೆಗೆ ಕೊಚ್ಚಿ ಹೋಗಿದ್ದು ಈ ಸೇತುವೆ ಕಳೆದ ವರ್ಷವಷ್ಟೆ ಪ್ರಧಾನಮಂತ್ರಿ ಯೋಜನೆಯಲ್ಲಿ ನಿರ್ಮಿಸಿದ ಸೇತುವೆಯಾಗಿದ್ದು ಈ ಹಿಂದೆ ಶಾಸಕರ ಗಮನಕ್ಕೂ ಸಹ ಈ ಸೇತುವೆಯ ಬಗ್ಗೆ ಗಮನಕ್ಕೆ ತರಲಾಗಿತ್ತು ಆದರೆ ನಿರಂತರ ಮಳೆಗೆ ಇದೀಗ ಸೇತುವೆ ಶಿಥಿಲವಸ್ಥೆಗೆ ತಲುಪಿದ್ದು ಗ್ರಾಮಸ್ಥರು ಗ್ರಾಮಕ್ಕೆ ತಿರುಗಾಡಲು ಸಂಪರ್ಕವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *