ಅರೇಹಳ್ಳಿ : ಚಿಣ್ಣರಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮನಸಿನಲ್ಲಿ ಕಲಿಕಾನುಭವ ಬೇರೂರುವಂತೆ ಮಾಡಲು ಇಲ್ಲೊಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಅಂಗನವಾಡಿ ಕೇಂದ್ರದ ರೂವಾರಿ ಸಾವಿತ್ರಿ, ತಮ್ಮ ಕಾರ್ಯಾನುಭವದೊಂದಿಗೆ ವಿವಿಧ ಪರಿಕರಗಳನ್ನು ಕ್ರಮ ಬದ್ಧವಾಗಿ ಜೋಡಿಸಿ ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುತ್ತಿದ್ದಾರೆ.

ಶಾಲಾ ಪೂರ್ವ ಹಂತದ ಕ್ರಿಯಾ ಯೋಜನೆಗಳನ್ನು ಪಟ್ಟಿ ಮಾಡಲಾಗಿದ್ದು ಅಂಗನವಾಡಿಯಲ್ಲಿ ಮಗು ಹೇಗಿರಬೇಕೆಂಬ ನಿಯಮವನ್ನು ಗೋಡೆಯ ಮೇಲೆ ತೂಗು ಹಾಕಲಾಗಿದೆ. ಬೆಳಗ್ಗೆ ಅಂಗನವಾಡಿ ಪ್ರಾರಂಭವಾದಾಗ ಶಿಕ್ಷಕಿ ಬೋಧಿಸಿದಂತೆ ಮಕ್ಕಳು ಪುನರಾವರ್ತಿಸುತ್ತಾರೆ.

ಮೊದಲು ಕಲಿಕೆಗೆ ಸಹಾಯಕವಾಗುವ ಸಂಖ್ಯೆ, ಅಕ್ಷರಾಭ್ಯಾಸವನ್ನು ಮಾಡಿಸಿ ಮಗು ಅಕ್ಷರಗಳನ್ನು ಪತ್ತೆ ಹಚ್ಚುವಂತೆ ಮಾಡುತ್ತಿದ್ದಾರೆ.

ಕ್ಯಾಲೆಂಡರ್, ಮಕ್ಕಳು ಬಿಡಿಸುವ ಚಿತ್ರಕ್ಕೆ ಬಣ್ಣ ಹಚ್ಚಿ ಪ್ರದರ್ಶಿಸುವ ಪ್ರದರ್ಶನ ಫಲಕ, ಲಿಂಗಾಪುರ ಗ್ರಾಮದ ಗ್ರಾಮ ನಕ್ಷೆ, ಮಕ್ಕಳ ತಮ್ಮ ಆಟಕೆಗಳನ್ನು ಹಾಕಿಡಲು ಮಗುವಿನ ಹೆಸರನ್ನು ಬರೆದಿರುವ ಮಕ್ಕಳ ಚೀಲ, ಬಣ್ಣದ ಪರಿಚಯ ಮಾಡಲು ಬಣ್ಣದ ಚೀಲ, ಆಕಾರಗಳ ಚೀಲ, ಎರಡು ಬದಿ ಹೆಸರುಗಳನ್ನು ಬರೆದಿರುವ ಮಕ್ಕಳ ಗುರುತಿನ ಚೀಟಿ, ಪದಗಳನ್ನಿಟ್ಟಿರುವ ಅಕ್ಷರ ಹೀಗೆ ಹಲವಾರು ವಿಷಯ ಸಾಮಗ್ರಿಗಳನ್ನು ಹೊಂದಿರುವ ಚೀಲಗಳನ್ನು ಕ್ರಮಬದ್ದವಾಗಿ ಮಗುವಿಗೆ ಗೋಚರವಾಗುವಂತೆ ಗೋಡೆಗೆ ನೇತು ಹಾಕಲಾಗಿದೆ. ಅಂಗನವಾಡಿಯಲ್ಲಿ ಎಲ್ಲರೊಂದಿಗೆ ಬೆರೆತು ಆಟವಾಡಲು ಹಿಂಜರಿಯುವಂತಹ ಸ್ವಭಾವದ ಮಕ್ಕಳಿಗೆ ಗೊಂಬೆ ಮನೆಯೂ ಸಹ ಇದೆ. ಮನೆಯಲ್ಲಿ ಉಪಯೋಗಿಸಿ ಎಸೆಯುವಂತಹ ವಸ್ತುಗಳನ್ನು ಸಂಗ್ರಹಿಸಿ ಅದರ ಮೂಲಕವೂ ಸಹ ವಸ್ತುಗಳನ್ನು ಪರಿಚಯ ಮಾಡಿಕೊಡಲಾಗಿದೆ. ಭತ್ತ, ಕಾಫಿ ಬೀಜ, ಚಾಕೋಲೇಟ್ ಸಿಪ್ಪೆ, ಟೂತ್ ಪೇಸ್ಟ್ ಕವರ್, ಹುಣಸೇ ಬೀಜ, ಅಡಿಕೆ, ಕೋಳಿ ಪುಕ್ಕ, ಕೆಂಪು ಬಣ್ಣದ ಕಲ್ಲುಗಳು, ದಾರ,ಬಣ್ಣದ ಪೆನ್ಸಿಲ್, ಸ್ಟ್ರಾ, ತೆಂಗಿನ ಚಿಪ್ಪು, ಖಾಲಿ ಬಾಟಲ್ ಮುಚ್ಚಳ, ಐಸ್‌ಕ್ರೀಂ ಡಬ್ಬಿ, ಖಾಲಿ ಪೆನ್ನು, ಬೆಂಕಿ ಪೊಟ್ಟಣದಂತಹ ಕಸಗಳನ್ನು ಹೆಕ್ಕಿ ಕಸವನ್ನು ರಸವನ್ನಾಗಿ ಪರಿವರ್ತಿಸಿ ಅವುಗಳ ಪಂಚಯ ಮಾಡಿಸಿ ಅವುಗಳನ್ನು ಸಂಪೂರ್ಣವಾಗಿ ಕಲಿಕೆಗೆ ಬಳಸಿಕೊಳ್ಳಲಾಗುತ್ತಿದೆ.

ಸಹಾಯಕಿಯಿಲ್ಲದೇ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಗೆ ಗ್ರಾಮಸ್ಥರು, ಮಕ್ಕಳ ಪೋಷಕರು ಸಾಥ್ ನೀಡುತ್ತಿದ್ದಾರೆ.

ಫಿಲ್ಟರ್ ನೀರಿನ ಸೌಲಭ್ಯ, 3 ಬೀರು, ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳು, ಚೇರ್ ವ್ಯವಸ್ಥೆ ಹೀಗೆ ಹತ್ತಾರು ಕೊಡುಗೆಗಳನ್ನು ನೀಡುವುದರ ಮೂಲಕ ಮಕ್ಕಳ ಕಲಿಕೆಗೆ ಪರೋಕ್ಷವಾಗಿ ನೆರವು ನೀಡುತ್ತಿದ್ದಾರೆ ಎಂದು ಲಿಂಗಾಪುರ ಗ್ರಾಮಸ್ಥರ ಸಹಕಾರವನ್ನು ಶ್ಲಾಘಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *