
ಹಾಸನ: ಟೈಲರ್ ವೃತ್ತಿ ಬಾಂಧವರ ಬೇಡಿಕೆ ಈಡೇರಿಕೆಗಾಗಿ ಹಲವು ಬಾರಿ ಹೋರಾಟ ನಡೆಸಲಾಗಿದ್ದು, ಇನ್ನು ಹೆಚ್ಚಿನ ಶಕ್ತಿ ಪ್ರದರ್ಶನಕ್ಕಾಗಿ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಎಸ್. ವೆಂಕಟೇಶ್ ತಿಳಿಸಿದರು.
ರವೀಂದ್ರ ನಗರದಲ್ಲಿರುವ ಜಿಲ್ಲಾ ಕುರುಹಿನ ಶೆಟ್ಟಿ ಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ವತಿಯಿಂದ ಭಾನುವಾರದಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ಗೌರಿಕೊಪ್ಪಲು ಮತ್ತು ಕೆ.ಆರ್. ಪುರಂ ವಲಯ ಸಮಿತಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲಸ ನಿರ್ವಹಿಸುವ ಟೈಲರ್ ರವರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ಕೊಡುತ್ತಲೆ ಬರಲಾಗುತ್ತಿದ್ದು, ಟೈಲರ್ ಅಸೋಸಿಯೇಶನ್ ವತಿಯಿಂದ ಇದುವರೆಗೂ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಘದ ಸಭೆ ನಡೆಸಲು ಒಂದು ಕಛೇರಿ ಇರಲಿಲ್ಲ. ಈಗ ನಿಮ್ಮೆಲ್ಲರ ಸಹಕಾರದಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಕಛೇರಿ ಮಾಡಲಾಗಿದೆ. ಈಗಾಗಲೇ ನಾಲ್ಕು ಸಮಿತಿಯನ್ನು ಮಾಡಲಾಗಿದ್ದು, ಸರಕಾರದಿಂದ ಏನೆನೂ ಸೌಲಭ್ಯ ಸಿಗಬಹುದು ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ ಎಂದರು.
ಟೈಲರ್ ವೃತ್ತಿ ಬಾಂಧವರಿಗೆ ಉಚಿತ ಆರೋಗ್ಯ ಶಿಬಿರವನ್ನು ಮಾಡಿಕೊಂಡು ಬರಲಾಗಿದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ಮಾಡಲಾಗಿದೆ. ಹಾಸನ ನಗರದಲ್ಲಿ ೩೫ ವಾರ್ಡ್‌ಗಳಿದ್ದು, ಅಲ್ಲಲ್ಲೆ ವಾರ್ಡ್‌ಗಳನ್ನು ಮಾಡಿದರೇ ಸುತ್ತಮುತ್ತವ ಟೈಲರ್ ಇರುವವರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಹಾಗೂ ಸದಸ್ಯತ್ವ ಕೊಡಲಾಗುವುದು. ಅಲ್ಲಿನ ವೃತ್ತಿ ಬಾಂಧವರಿಗೆ ಒಳ್ಳೆಯದಾಗಲಿ. ಈ ನಿಟ್ಟಿನಲ್ಲಿ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿವಿಮಾತು ಹೇಳಿದರು. ಯಾವುದೇ ಹೋರಾಟ ಮಾಡಬೇಕಾದರೇ ಸಂಘದ ಒಗ್ಗಟ್ಟು ಇರಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಒಂದು ವಲಯ ಸಮಿತಿ ಮಾಡಲಾಗುವುದು. ಟೈಲರ್ ಸಂಘದಲ್ಲಿ ಒಟ್ಟು ೨೪೦೦ ಜನ ಸದಸ್ಯರು ಇದ್ದು, ಕಳೆದ ೨ ವರ್ಷದಲ್ಲಿ ೪೦೦ ಜನ ಸದಸ್ಯರನ್ನು ಮಾಡಲಾಗಿದೆ. ಬೆಂಗಳೂರು ಚಲೋ ಚಳುವಳಿಯಲ್ಲಿ ನಮ್ಮ ಬೇಡಿಕೆ ಈಡೇರಿಸುವುದಾಗಿ ಸರಕಾರ ಹೇಳಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಖಜಾಂಚಿ ಬಿ.ಎಂ. ನಾಗೇಂದ್ರ, ಸರಸ್ವತಿ ಪುರಂ ವಲಯ ಸಮಿತಿ ಅಧ್ಯಕ್ಷ ವೇಲಾಪುರಿ ಗೌಡ, ಕಾರ್ಯದರ್ಶಿ ಮೋಹನ್, ಪೆನ್ಷನ್ ಮೊಹಲ್ಲ ವಲತ ಸಮಿತಿ ಕಾರ್ಯದರ್ಶಿ ಬಾಬು, ಯೂನಿಸ್ ಷರೀಫ್, ಹಿರಿಯರಾದ ಬಿ.ಕೆ. ಬಾಲಕೃಷ್ಣ, ಕಾಟೀಹಳ್ಳಿ ವಲಯ ಸಮಿತಿಯ ಮಂಜೇಗೌಡ, ಹಾಸನಾಂಬ ವಲಯ ಸಮಿತಿಯ ವೀರ ರಾಘವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



