
ಅರೇಹಳ್ಳಿ: ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ವಾಹನದಟ್ಟಣೆ ಇರುವ ಪ್ರದೇಶದಲ್ಲಿ ಮುಖ್ಯ ರಸ್ತೆಯನ್ನು ದಾಟುವಾಗ ಟ್ರಾಫಿಕ್ ಸಿಗ್ನಲ್ ಲೈಟನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಕಲೇಶಪುರ ವಿಭಾಗದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಎಆರ್‌ಟಿಒ ಮಧುರಾ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ರೋಟರಿ ಶಾಲೆಯಲ್ಲಿ ರೋಟರಿ ಕ್ಲಬ್ ಹಾಗೂ ಸಕಲೇಶಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಕಾರ‍್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಮನೆಯಿಂದ ಸುರಕ್ಷತೆಯಿಂದ ಹೊರಟು ಪುನಃ ಮನೆಗೆ ಸುರಕ್ಷಿತವಾಗಿ ತಲುಪುವಂತೆ ಮಾಡಲು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಕಾರ‍್ಯಕ್ರಮದ ಉದ್ದೇಶವಾಗಿದೆ. ರಸ್ತೆ ನಿಯಮಗಳನ್ನು ಚಾಚೂ ತಪ್ಪದೇ ಎಲ್ಲರೂ ಪಾಲನೆ ಮಾಡಲೇಬೇಕು ಎಂದರು.
ಬ್ರೇಕ್ ಇನ್ಸ್ಪೆಕ್ಟರ್ ಆಶಾ ಮಾತನಾಡಿ, ಬೇಜವಾಬ್ದಾರಿತನ ಹಾಗೂ ಅತೀ ವೇಗದ ಚಾಲನೆ ಅಪಘಾತಕ್ಕೆ ಮೂಲ ಕಾರಣವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಬೈಕ್ ಹಿಂಭಾಗದಲ್ಲಿ ಕೂರಿಸಿಕೊಂಡು ಚಾಲನೆ ಮಾಡುವಾಗ ತಮ್ಮ ಮಗುವನ್ನು ಬೆಲ್ಟ್ ನಿಂದ ಕಟ್ಟಿಕೊಳ್ಳಬೇಕು. ಬೈಕ್‌ನಲ್ಲಿ ತೆರಳುವ ವೇಳೆ ಚಿಕ್ಕ ಮಕ್ಕಳು ಬೈಕ್ ಹಿಂಬದಿ ಸರಿಯಾಗಿ ಕುಳಿತುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಿಕ್ಕ ಮಕ್ಕಳ ಜೊತೆ ಸಂಚರಿಸುವ ಪೋಷಕರು ಈ ನಿಯಮವನ್ನು ಪಾಲಿಸಬೇಕು. ಅಪ್ರಾಪ್ತ ಮಕ್ಕಳು ವಾಹನಗಳನ್ನು ಚಲಾಯಿಸಿದರೆ ಪೋಷಕರ ಮೇಲೆ ಕೇಸು ದಾಖಲಿಸಲಾಗುತ್ತದೆ ಎಂದರು.
ಈ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ರೋ.ಕಾರ್ತಿಕ್ ಕೆ.ಆರ್, ಕಾರ‍್ಯದರ್ಶಿ ರೋ.ಚೇತನ್ ಪ್ರಕಾಶ್, ರೋಟರಿ ಶಾಲೆಯ ಅಧ್ಯಕ್ಷ ರೋ.ಮನೋಹರ್ ಮೆಂಡೊನ್ಸಾ, ಟ್ರಸ್ಟ್ ಅಧ್ಯಕ್ಷ ರೋ.ಹರೀಶ್ ಬಿ.ಪಿ, ಖಜಾಂಚಿ ರೋ.ಕಿಶೋರ್ ವಿ, ರೋಟರಿ ಸದಸ್ಯರಾದ ರೋ.ನವೀನ್ ಚಂದ್ರ, ರೋ.ಶರತ್ ಬಿ.ಎಂ., ರೋ.ಪೃಥ್ವಿ ಬಿ.ಯು, ರೋ.ಯಶ್ವಂತ್,ಶಾಲೆಯ ಮುಖ್ಯ ಶಿಕ್ಷಕಿ ತುಳಸಿ ಅಮ್ಮಲ್, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
