
ಸಕಲೇಶಪುರ : ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ಸರ್ಕಾರ ನಿರ್ಧಾರ ಮಾಡಿರುವುದು ಮಲೆನಾಡು ರೈತರ ಹಿತದೃಷ್ಟಿಯಿಂದ ಸ್ವಾಗತಾರ್ಹ ಎಂದು ಪಶ್ಚಿಮಘಟ್ಟ ಮೂಲ ನಿವಾಸಿಗಳ ಹೋರಾಟ ಸಮಿತಿಯ ಅಧ್ಯಕ್ಷ ಬಾಚಿಹಳ್ಳಿ ಪ್ರತಾಪ್‌ಗೌಡ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
TV46 ನೊಂದಿಗೆ ಮಾತನಾಡಿರುವ ಅವರು, ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್ ಹುಕುಂ ಯೋಜನೆಯಡಿಯಲ್ಲಿ ತಿರಸ್ಕೃತಗೊಂಡಿದ್ದ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಇತ್ತೀಚೆಗೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದ್ದರು. ಅದರಂತೆ ನಿರ್ಧಾರ ಮಾಡಿರುವುದು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಹಾಗೂ ಸರ್ಕಾರದ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಗರ್ ಹುಕಂ ಕಮಿಟಿಯಲ್ಲಿ ಸಕ್ರಮದ ಜೊತೆ ಸಾಗುವಳಿ ಚೀಟಿ ಮತ್ತು ಭೂಮಿ ಸರ್ವೆ ಮಾಡಿ ರೈತರ ಹೆಸರಿಗೆ ನೋಂದಣಿ ಕೂಡ ಮಾಡಿಕೊಡುತ್ತೇವೆ. ರೈತರ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡಿಕೊಡುತ್ತೇವೆ ಎಂದು ಸಚಿವರು ಈಗಾಗಲೇ ಹೇಳಿರುವುದು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಸಾಗುವಳಿ ಮಾಡುತ್ತಿರುವರುವ ೧೪ ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಸರ್ಕಾರಿ ಭೂಮಿ ಸಕ್ರಮಗೊಳಿಸುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್‌ಗಳ ಜೊತೆ ಸಚಿವರು ಸಭೆ ನಡೆಸಿರುವುದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.
