ಹಾಸನ: ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್.ಸಿ( ಅನಾರ್ಸ್) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2024-25 ರ ಅಂಗವಾಗಿ ಜೀವಾಮೃತ ಪದ್ಧತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗುವ ಜೀವಾಮೃತ ತಯಾರಿಕೆ ವಿಧಾನವನ್ನು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಹಳ್ಳಿಯ ಜನರಿಗೆ ವಿವರಿಸಿದರು.

ಕಚ್ಚಾ ವಸ್ತುಗಳಾದ ನೀರು, ಸಗಣಿ, ಗಂಜಲ, ಕಪ್ಪು ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಹಾಗೂ ಕೆಂಪು ಮಣ್ಣು ಬೇಕಾಗಿದ್ದು, 50 ಲೀಟರ್ ನೀರಿಗೆ 2.5 ಕೆಜಿ ಸಗಣಿ, 2.5 ಲೀಟರ್ ಗಂಜಲ, 500 ಗ್ರಾಂ ಬೆಲ್ಲ, 500 ಗ್ರಾಂ ಹಿಟ್ಟು ಹಾಗೂ 1-2 ಹಿಡಿ ಕೆಂಪು ಮಣ್ಣನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಿಶ್ರಣವನ್ನು 7 ರಿಂದ 11 ದಿನಗಳ ಕಾಲ ನೆರಳಿನಲ್ಲಿ ಇಟ್ಟು, ದಿನಕ್ಕೆ ಎರಡು ಬಾರಿಯಂತೆ ವೃತ್ತಾಕಾರವಾಗಿ ಕೋಲಿನಿಂದ ತಿರಗಿಸಬೇಕು. ಮಣ್ಣಿನಲ್ಲಿ ತೇವಾಂಶವಿರುವ ಸಮಯದಲ್ಲಿ ಬಹುವಾರ್ಷಿಕ ಬೆಳೆಗಳಿಗೆ 2 ಅಡಿ ಅಂತರದಲ್ಲಿ ಹಾಗೂ ಅಲ್ಪಾವಧಿ ಬೆಳೆಗಳಿಗೆ ಸಾಲುಗಳ ಮಧ್ಯ ಹಾಕಬೇಕು, ಇದರಿಂದಾಗಿ ಮಣ್ಣಿನ ಸೂಕ್ಷ್ಮ ಜೀವಿಗಳ ಸಂಖ್ಯೆ ದ್ವಿಗುಣಗೊಂಡು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಮನವರಿಕೆ ಮಾಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೇಸಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಟಿ.ಭೈರಪ್ಪನವರ್, ಗ್ರಾಮಸ್ಥರಾದ ಕುಮಾರಣ್ಣ, ಮಂಜೇಗೌಡ್ರು, ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.

ಡಾ.ಎಸ್.ಟಿ.ಭೈರಪ್ಪನವರ್ ಜೀವಾಮೃತದ ಮಹತ್ವ ಮತ್ತು ಅದನ್ನು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *