
ಅರೇಹಳ್ಳಿ : ಸುಮಾರು ಆರೇಳು ವರ್ಷಗಳ ಹಿಂದೆ ಪಟ್ಟಣದ ಇಂದಿರಾನಗರ ಹಾಗು ಕೇಶವನಗರದಲ್ಲಿ ಬಾಡಿಗೆ ಮನೆ ಪಡೆದುಕೊಂಡು ಸ್ಥಳೀಯರೊಂದಿಗೆ ಪೇಂಟಿಂಗ್ ಹಾಗು ಗಾರೆ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದ ಅವರನ್ನು ಬಹುತೇಕ ಸ್ಥಳೀಯರು ಡೆಲ್ಲಿ ಎಂದೆ ಕರೆಯುತ್ತಿದ್ದರು.
ಕಳೆದ ನಾಲ್ಕೈದು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಉತ್ತರ ಪ್ರದೇಶ ಮೂಲದ ವಲಸೆ ಕಟ್ಟಡ ಕಾರ್ಮಿಕನೊಬ್ಬನ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಈಹ ಲೋಕ ತ್ಯಜಿಸಿದ್ದು ನಿರ್ಗತಿಕನಾಗಿದ್ದ ಅವನ ಶವವನ್ನು ಗ್ರಾಮಸ್ಥರು ಹಿಂದೂ ಧಾರ್ಮಿಕ ಪದ್ಧತಿಯಂತೆ ಶವ ಸಂಸ್ಕಾರ ನೆರವೇರಿಸಿ ಅನಾಥ ಶವಕ್ಕೆ ಸಹೃದಯಿ ಗ್ರಾಮಸ್ಥರು ಆಸರೆಯಾದ ಅಪರೂಪದ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದಲ್ಲಿ ವರದಿಯಾಗಿದೆ.
ಅಂತ್ಯ ಸಂಸ್ಕಾರವನ್ನು ನೆರವೇರಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್ ಮಾತನಾಡಿ ಸುಮಾರು ಆರೇಳು ವರ್ಷಗಳಿಂದ ಪಟ್ಟಣದಲ್ಲಿ ಬಾಡಿಗೆ ಮನೆ ಪಡೆದುಕೊಂಡು ಜೀವನ ಸಾಗಿಸುತ್ತಿದ್ದ ಅವರಿಗೆ ಸಂಬಂಧಿಕರು ಯಾರು ಸಂಪರ್ಕದಲ್ಲಿ ಇರಲಿಲ್ಲ ಹಾಗಾಗಿ ಕಳೆದ ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದ ಬಳಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತ ಪಟ್ಟಿದ್ದು ಈ ಸಂಬಂಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತನ ಸಂಬಂಧಿಕರು ಯಾರು ಇಲ್ಲದ ಕಾರಣ ಗ್ರಾಮ ಪಂಚಾಯತಿ ನೆರವಿನೊಂದಿಗೆ ಪಟ್ಟಣದ ಕೇಶವನಗದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರವನ್ನು ಗ್ರಾಮದ ಯುವಕರ ಸಹಕಾರದೊಂದಿಗೆ ನೆರೆವೇರಿಸಲಾಗಿದೆ ಎಂದರು.
ಈ ವೇಳೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಶೇಖರ್,ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಜೇಗೌಡ, ಅಶೋಕ್ ಗೌಡ,ಸುಂದರ್ ರೈ,ಮಂಜುನಾಥ್,ದೀಪು, ಯೋಗೇಶ್, ಕಿರಣ್, ಸಂದೇಶ್,ಶಾರದಾ ಸ್ವಾಮಿ ಹಾಗು ಇನ್ನಿತರ ಹಾಜರಿದ್ದರು
