
ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಮಾಲೂರು ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.
‘ಬಾಲಾಜಿಕೃಪಾ ಎಂಟರ್‌ಪ್ರೈಸಸ್’ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ₹7.17 ಕೋಟಿ ಬ್ಯಾಂಕ್ ಸಾಲ ಪಡೆದಿದ್ದರು.
ಈವರೆಗೆ ₹3.53 ಕೋಟಿ ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.ಪ್ರಕರಣದಲ್ಲಿ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ಕೆ.ವಿ.ಹನುಮಪ್ಪ ರೆಡ್ಡಿ, ಜಿ.ಎಂ.ರಮೇಶ್, ಶೀನಿವಾಸ್ ಹಾಗೂ ಮುನಿರಾಜು ಎಂಬವರು ಭಾಗಿಯಾಗಿದ್ದಾರೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ನಗರ ಶಾಖೆಯ ಎಸ್‌ಬಿಎಂ ವ್ಯವಸ್ಥಾಪಕ ಎಂ.ಟಿ.ವಿ ರೆಡ್ಡಿ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2) ಅಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ನ್ಯಾಯಾಲಯವು, ಕೃಷ್ಣಯ್ಯ ಸೆಟ್ಟಿ ಸೇರಿದಂತೆ ಎಲ್ಲ ಆರೋಪಿಗಳನ್ನು ಅಪರಾಧಿಗಳು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಘೋಷಿಸುವ ಸಾಧ್ಯತೆಗಳಿವೆ.