
ಸಕಲೇಶಪುರ : ದೋಣಿಗಲ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75 ಅಗಲ ಕಡಿಮೆ ಇರುವ ಕಾರಣ ಅಲ್ಲಿ ಆಗಾಗ ವಾಹನ ಸಂಚಾರ ಕ್ಕೆ ಅಡಚಣೆ ಆಗುತ್ತಿದೆ.ದೋಣಿಗಲ್ ನಿಂದ ಕಪ್ಪಳ್ಳಿ ವರೆಗೆ ಹೆದ್ದಾರಿ ಕಾಮಗಾರಿ ನಡೆದಿರುವುದರಿಂದ ಇಲ್ಲಿ ದ್ವಿಮುಖ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.
ಈಗ ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈ ಭಾಗದಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು ಹೆದ್ದಾರಿ ಕಾಮಗಾರಿಗೆ ಅನುಕೂಲ ಮಾಡಿಕೊಡುವುದಾಗಿ ಉಪ-ವಿಭಾಗಾಧಿಕಾರಿಗಳು ಹೇಳಿರುತ್ತಾರೆ.
ಅಂದರೆ ದೋಣಿಗಲ್ ನಿಂದ ಕಪ್ಪಳ್ಳಿ ವರೆಗೆ ಒಂದು ಮಾರ್ಗದ ವಾಹನಗಳನ್ನು ಹುಲ್ಲಹಳ್ಳಿ ಗಡಿ – ಕೆಸಗಾನಹಳ್ಳಿ ಮೂಲಕ ಕಪ್ಪಳ್ಳಿಗೆ ಪರ್ಯಾಯ ರಸ್ತೆ ಮೂಲಕ ತೆರಳಲು ಆಲೋಚಿಸಿರುತ್ತಾರೆ.ಆದರೆ ಈ ಬದಲಿ ರಸ್ತೆಯ ಬಳಕೆಗೂ ಮೊದಲು ದೋಣಿಗಲ್ ನಿಂದ ಹುಲ್ಲಹಳ್ಳಿ ಗಡಿವರೆಗೆ SH 27 ಹೆದ್ದಾರಿಯನ್ನು ಎರಡೂ ಬದಿಗಳಲ್ಲಿ ಕನಿಷ್ಟ ಒಂದು ಮೀಟರ್ ಗಳಷ್ಟು ಅಗಲೀಕರಣ ಆಗಬೇಕು.ಹಾಗೆಯೇ ಕೆಸಗಾನಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಸಿಮೆಂಟ್ ರಸ್ತೆಯ ಪ್ರಾರಂಭ ಹಾಗೂ ಅಂತ್ಯದಲ್ಲಿ 2.5 ಮೀಟರ್ ಎತ್ತರಕ್ಕಿಂತ ಹೆಚ್ಚು ಗಾತ್ರದ ಯಾವುದೇ ವಾಹನಗಳು ಪ್ರವೇಶಿಸದಂತೆ ಬ್ಯಾರಿಕೇಡ್ ಅನ್ನು ಅಳವಡಿಸಬೇಕು.
ಈ ರಸ್ತೆ ಸಂಪರ್ಕದ ಬಳಿ ರಸ್ತೆ ಉಬ್ಬುಗಳನ್ನು (humps) ನಿರ್ಮಿಸಬೇಕು. ಹಾಗೂ ಹುಲ್ಲಹಳ್ಳಿ ಗಡಿಯಿಂದ ಕಪ್ಪಳ್ಳಿ ಗ್ರಾಮಕ್ಕೆ ಸಾಗುವ ಪರ್ಯಾಯ ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಟ 2 ಮೀಟರ್ ಕುರುಚಲು ಹಾಗೂ ಗಿಡಗಂಟಿಗಳನ್ನು ಸ್ವಚ್ಟಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
ಈ ಎಲ್ಲ ಅಂಶಗಳನ್ನು ಕಾರ್ಯರೂಪಕ್ಕೆ ತರದೇ ಏಕಮುಖ ಸಂಚಾರಕ್ಕೆ ರಾಹೆ ಪ್ರಾಧಿಕಾರ ಮುಂದಾದರೆ ಕರವೇ ವತಿಯಿಂದ ತೀವ್ರವಾದ ಪ್ರತಿರೋಧ ನೀಡುವುದಾಗಿ ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷರಾದ ರಮೇಶ್ ಪೂಜಾರಿಯವರು ರಾಹೆ ಪ್ರಾಧಿಕಾರಕ್ಕೆ ಗಂಭೀರವಾದ ಎಚ್ಟರಿಕೆ ನೀಡಿದ್ದಾರೆ.
