
ಸಕಲೇಶಪುರ: ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ರೆಸಾರ್ಟ್‌ವೊಂದರಲ್ಲಿ ನಡೆದ ಗಲಾಟೆ ಮತ್ತು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅತಿಥಿಗಳೇ ರೆಸಾರ್ಟ್ ಸಿಬ್ಬಂದಿಗಳ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಮಾಲಿಕ ಆರೋಪಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದಾರೆ.
ಮಂಗಳೂರಿನಿಂದ ಬಂದಿದ್ದ ಮೂರು ಕುಟುಂಬಗಳ 20 ಕ್ಕೂ ಹೆಚ್ಚು ಜನರು ರೆಸಾರ್ಟ್‌ನಲ್ಲಿ ದಾಂದಲೆ ನಡೆಸಿ ಮತ್ತೊಂದು ಕುಟುಂಬದ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ರೆಸಾರ್ಟ್ ಮಾಲೀಕರು ಸಂಪೂರ್ಣ ಘಟನೆಯ ಸಿಸಿಟಿವಿ ದೃಶ್ಯಾವಳಿಯೊಂದಿಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ರಾತ್ರಿ 7 ಗಂಟೆಯ ನಂತರ ಈಜುಕೊಳ ಬಳಕೆಗೆ ನಿಷೇಧ ವಿತ್ತೆಂಬ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು ಈ ವೇಳೆ ಮಂಗಳೂರಿನ ಗುಂಪು ದೊಣ್ಣೆ, ಬಡಿಗೆ ಹಿಡಿದು ರೆಸಾರ್ಟ್‌ನಲ್ಲಿ ಓಡಾಡುತ್ತಾ ಕಲ್ಲು ತೂರಾಟ ನಡೆಸಿ ಮತ್ತೊಂದು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ.
ಈ ಗಲಾಟೆಯಲ್ಲಿ ರೆಸಾರ್ಟ್ ಸಿಬ್ಬಂದಿಯನ್ನು ಗುರಿಯಾಗಿಸಿದ್ದು, ತಮ್ಮ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡಲಾಗಿದೆ ಎಂದು ರೆಸಾರ್ಟ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಿಸಿಟಿವಿ ದೃಶ್ಯಗಳಲ್ಲಿ ಕೆಲ ಕಿಡಿಗೇಡಿಗಳು ರೌಡಿಗಳಂತೆ ರೆಸಾರ್ಟ್‌ನಲ್ಲಿ ಗಲಾಟೆ ನಡೆಸುವುದು ಸೆರೆಯಾಗಿದೆ
ಘಟನೆಯ ನಂತರ ಆರೋಪಿಗಳು ರೆಸಾರ್ಟ್ ಖಾಲಿ ಮಾಡಿಕೊಂಡು ಹೋಗಿದ್ದು ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.
