
ಅರೇಹಳ್ಳಿ: ಬೇಲೂರು ತಾಲೂಕು ಅರೇಹಳ್ಳಿಯ ಪೊಲೀಸ್ ಠಾಣೆ ಎದುರಿಗಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ಯಶಸ್ವಿಯಾಗಿ ಸಂಪನ್ನ ಗೊಂಡಿತು.
ಎರಡು ದಿನಗಳ ಕಾಲ ನಾನಾ ಪೂಜಾ ಕೈಂಕರ್ಯಗಳು ನೆರವೇರಿದವು. ಮೊದಲ ದಿನ ಪ್ರಾರ್ಥನೆ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ , ಮಹಾ ಪೂಜೆ, ಮಹಾಮಂಗಳಾರತಿ, ಸಂಜೆಯ ವೇಳೆಗೆ ಪ್ರಾಸದ ವಾಸ್ತು ಹೋಮ , ರಂಗಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಪೂಜೋತ್ಸವದ ಎರಡನೇ ದಿನ ಕಲಾಭಿವೃದ್ಧಿ ಹೋಮ,ಮಹಾಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ನಾನಾ ಹೋಮಗಳನ್ನು ನೆರವೇರಿಸುವುದರ ಮೂಲಕ ಶ್ರೀ ಸಿದ್ಧಿ ವಿನಾಯಕ ವಾರ್ಷಿಕ ಪೂಜಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾಮಂಗಳಾರತಿ ವೇಳೆ ಸುರಿದ ಮಳೆಯ ಮೂಲಕ ದೇವರು ನಮ್ಮೆಲ್ಲರನ್ನೂ ಹರಸಿದ್ದಾನೆ. ಮುಂದೆ ಉತ್ತಮ ಮಳೆ, ಬೆಳೆ ಆಗಿ ಇಷ್ಟಾರ್ಥ ಪ್ರಾಪ್ತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ನಂತರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ, ವಾರ್ಷಿಕ ಪೂಜೋತ್ಸವದ ಹಿನ್ನಲೆ ಭಕ್ತಿ ಭಾವದಿಂದ ಪೂಜಾ ಕೈಂಕರ್ಯಗಳು ನಡೆದಿದೆ.
ಸಿದ್ದೇಶ್ ನಾಗೇಂದ್ರ, ಮಲ್ಲಿಕಾರ್ಜುನ ಟ್ರೇಡರ್ಸ್ ಮಾಲೀಕ ತ್ಯಾಗರಾಜು ಹಾಗೂ ಗ್ರಾಮಸ್ಥರ ಸಹಕಾರದಿಂದ ಇಷ್ಟು ವ್ಯವಸ್ಥಿತವಾಗಿ ಪೂಜೋತ್ಸವವನ್ನು ಆಯೋಜನೆ ಮಾಡಲು ಸಾಧ್ಯವಾಗಿದೆ.
ಇದು ೨೩ ನೇ ವಾರ್ಷಿಕೋತ್ಸವವಾದ್ದರಿಂದ ಇನ್ನೆರಡು ವರ್ಷಗಳಲ್ಲಿ ದೇವಸ್ಥಾನವು ೨೫ ವರ್ಷ ಪೂರೈಸಲಿರುವುದರಿಂದ ವಿಜೃಂಭಣೆಯ ಬೆಳ್ಳಿ ಹಬ್ಬವನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಮಲ್ಲಿಕಾರ್ಜುನ್ ಟ್ರೇರ‍್ಸ್ ಮಾಲೀಕ ತ್ಯಾಗರಾಜು, ಶ್ರೀನಿವಾಸ್, ಸಚಿನ್ ರೈ, ಪ್ರಕಾಶ್, ಪುನೀತ್, ರಾಜು ಉತ್ತೊಳಲು, ಧನರಾಜ್, ತಮ್ಮಯ್ಯ, ಪ್ರಸಾದ್,ಶ್ರೀಪತಿ ಅತ್ವಾರ್,ಸತೀಶ್ ಹಾಗೂ ಇನ್ನಿತರ ಭಕ್ತಾದಿಗಳು ಈ ಪೂಜೋತ್ಸವದಲ್ಲಿ ಭಾಗವಹಿಸಿದ್ದರು.



