
ಸಕಲೇಶಪುರ : ಕನ್ನಡ ಒಂದು ಪರಿಪೂರ್ಣ ಭಾಷೆ. ದ್ರಾವಿಡ ಭಾಷೆಗಳಲ್ಲೇ ಕನ್ನಡದ ಮಹತ್ವ ಹಾಗೂ ಪ್ರಾಮುಖ್ಯತೆ ಉನ್ನತ ಮಟ್ಟ ದಲ್ಲಿದೆ.ಕನ್ನಡಕ್ಕೆ ಈ ಕಾರಣಕ್ಕಾಗೇ ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನ ಹಾಗೂ ಗೌರವ ಇದೆ.ಇಂದಿಗೂ ಕೂಡ ತಮಿಳು ಭಾಷೆಯಲ್ಲಿ ಲಿಪಿಗಳು ಪರಿಪೂರ್ಣವಾಗಿಲ್ಲ.ಕನ್ನಡದ ಲಿಪಿ -ವ್ಯಾಕರಣ – ಬರವಣಿಗೆ ಎಲ್ಲ ಭಾಷೆಗಳಿಗಿಂತಲೂ ಮೇಲು ಮಟ್ಟದಲ್ಲಿದೆ.
ಕಮಲಹಾಸನ್ ಒಬ್ಬ ಶ್ರೇಷ್ಟ ನಟ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಕೂಡ ಅವರಿಗೆ ಪರಿಣತಿ ಇದೆ ಎಂದು ಅವರು ಭಾವಿಸಿಕೊಂಡಿರುವುದು ಅವರ ಹುಂಬತನ .ದ್ರಾವಿಡ ಭಾಷೆಗಳೆಲ್ಲವೂ ಸೋದರ ಭಾಷೆಗಳು.ಇತರೆ ಭಾಷೆಗಳ ಕುರಿತು ಕನ್ನಡಿಗರಿಗೆ ಇರುವಷ್ಟೇ ಗೌರವವನ್ನು ಬೇರೆ ಭಾಷಿಕರು ಕೂಡ ಕನ್ನಡಕ್ಕೆ ನೀಡಬೇಕು.ಒಂದು ವೇಳೆ ಗೌರವ ನೀಡಲು ಅವರಿಗೆ ಆಗದಿದ್ದಲ್ಲಿ ಮೌನವಾಗಿರಬೇಕು.
ಕನ್ನಡ ನುಡಿ ಬಗ್ಗೆ ಈ ರೀತಿ ಹಗುರವಾಗಿ ಯಾರೇ ಹೇಳಿಕೆ ನೀಡಿದರೂ ಕೂಡ ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಕಮಲಹಾಸನ್ ರಿಗೆ ನೀಡುತ್ತಿದ್ದೇವೆ.ಅವರ ತರ್ಕರಹಿತ / ಆಧಾರರಹಿತ ಹೇಳಿಕೆಗಳನ್ನು ಖಂಡಿಸುತ್ತೇವೆ. ಹಾಗೆಯೇ ಕಮಲಹಾಸನ್ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿ, ಅವರು ಕೂಡಲೇ ತಮ್ಮ ಅಭಿಪ್ರಾಯವನ್ನು ಹಿಂಪಡೆಯಬೇಕು ಎಂದು ಆಗ್ರಹಪಡಿಸುತ್ತೇನೆ.
ಕನ್ನಡದ ಮಹತ್ವ ಹಾಗೂ ಅಸ್ಮಿತೆಗೆ ಯಾರೇ ಆದರೂ ಧಕ್ಕೆ ತರಲು ಯತ್ನಿಸಿದರೆ ಅವರ ಸ್ಥಾನಮಾನಗಳನ್ನು ಕೂಡ ಪರಿಗಣಿಸದೆ ಉಗ್ರವಾದ ಖಂಡನೆಗೆ ಗುರಿಪಡಿಸಲೇ ಬೇಕಾಗುತ್ತದೆ ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಕಟುವಾಗಿ ಎಚ್ಚರಿಗೆ ನೀಡಿದೆ.
