
ಹಾಸನ :- ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಕಂದಲಿ, ಹಾಸನ, ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಕೃಷಿ ಸಂಶೋಧನಾ ಕೇಂದ್ರ, ಮಡೆನೂರು, ಗುಂಜೇವು ಹಾಗೂ ಅರಸೀಕೆರೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಪೂರ್ವ ಮುಂಗಾರು ತಾಂತ್ರಿಕ ಆಂದೋಲನ ಹಾಗೂ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭವನ್ನು ದಿನಾಂಕ 12.06.2025 ರಂದು ಕೃಷಿ ವಿಜ್ಞಾನ ಕೇಂದ್ರ ಕಂದಲಿಯಲ್ಲಿ ಆಯೋಜಿಸಲಾಗಿತ್ತು.
ಡಾ. ಓ.ಆರ್ ನಟರಾಜು. ಡೀನ್ (ಪಶುವೈದ್ಯಕೀಯ), ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಹೈನುಗಾರಿಕೆ ಇತ್ತೀಜಿನ ದಿನಗಳಲ್ಲಿ ಸಾಕಷ್ಟು ಲಾಭದಾಯಕ ಉದ್ಯಮವಾಗಿದ್ದು ಇದರಲ್ಲಿ ಉತ್ತಮ ಮೇವಿನ ತಳಿಗಳನ್ನು ಆಯ್ಕೆ ಮಾಡಿದರೆ ಗುಣಮಟ್ಟದ ಹಾಲಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು.
ಡಾ. ರಮಣಪ್ಪ, ವಿಜ್ಞಾನಿ (ರಾಷ್ಟ್ರೀಯ ಬೀಜೋತ್ಪಾದನೆ ಯೋಜನೆ. ಜಿಕೆವಿಕೆ. ಬೆಂಗಳೂರು) ರವರು ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯದಿಂದ ವಿವಿಧ ನೂತನ ತಳಿಗಳನ್ನು ಬಿಡುಗಡೆ ಮಾಡಿದ್ದು ಅವುಗಳನ್ನು ಕಾಲಾವಧಿಗೆ ಅನುಸಾರವಾಗಿ ಬಳಸಿಕೊಂಡರೆ ಹೆಚ್ಚು ಲಾಭವನ್ನು ಪಡೆಯಬಹುದೆಂದು ತಿಳಿಸಿದರು.
ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದ ಡಾ. ರಾಮಕೃಷ್ಣನ್ ಎಂ.ಎ., ರವರು ಮಾತನಾಡಿ ಜಾನುವಾರುಗಳಲ್ಲಿ ಕಾಲು ಬಾಯಿ ರೋಗಗಳ ಬಗ್ಗೆ ಹಾಗೂ ಜಾನುವಾರುಗಳಿಗೆ ಸಿಗುವ ವಿವಿಧ ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ಪಶುವೈಧ್ಯಕೀಯ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿಯಾದ ಡಾ. ಕೆ ನಾರಾಯಣನ್ ರವರು ಮಾತನಾಡಿ ಪಶುಗಳ ಪೋಷಣೆಯಲ್ಲಿ ರೈತರು ಗಮನಿಸಬೇಕಾದ ಅಂಶಗಳ ಬಗ್ಗೆ ತಿಳಿಸಿ ಸಕಾಲಕ್ಕೆ ಲಸಿಕೆಗಳನ್ನು ಹಾಕಿಸಲು ಸಲಹೆ ನೀಡಿದರು.
ಚಂದ್ರಮೌಳಿ, ಯೋಜನಾ ನಿರ್ದೇಶಕರು, ಎನ್.ಆರ್.ಎಲ್.ಎಂ-ಡಿ.ಆರ್.ಡಿ.ಎ, ಜಿಲ್ಲಾ ಪಂಚಾಯತಿ, ಹಾಸನ ರವರು ಮಾತನಾಡಿ ಕಾಲ ಕಾಲಕ್ಕೆ ವಿಜ್ಞಾನಿಗಳು ನೀಡುವಂತಹ ಸಲಹೆಗಳನ್ನು ಅನುಸರಿಸಿ ಕೃಷಿ ಮಾಡಿದರೆ ಉತ್ತಮ ಆದಾಯವನ್ನು ಪಡೆಯಬಹುದೆಂದು ಅರಿವು ಮೂಡಿಸಿದರು.
ನಂಜುಂಡಪ್ಪ ಎಂ.ಹೆಚ್., ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹಾಸನ ರವರು ಮಾತನಾಡಿ ಮೀನುಗಾರಿಕೆ ಒಂದು ಮಹತ್ತರವಾದ ಉದ್ಯಮವಾಗಿದ್ದು ನಿಮ್ಮ ಸ್ಥಳಗಳಲ್ಲಿ ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನ ಆಧಾರಿಸಿ ಸೂಕ್ತ ತಳಿಗಳನ್ನು ಆಯ್ಕೆ ಮಾಡಿ ಉತ್ತಮ ಆದಾಯವನ್ನು ಪಡೆಯಬಹುದಾಗಿದ್ದು ಮೀನು ಪಾಲನಾ ಕೇಂದ್ರಗಳನ್ನು ಸ್ಥಾಪಿಸಿ ಉದ್ಯೋಗ ಅವಕಾಶವನ್ನು ಸೃಷ್ಟಿಸಬಹುದೆಂದು ಮಾಹಿತಿ ನೀಡಿದರು.
ಹಾಸನ ಜಿಲ್ಲೆಯ ಲೀಡ್ ಬ್ಯಾಂಕ್ (ಕೆನರಾ ಬ್ಯಾಂಕ್)ನ ಜಿಲ್ಲಾ ವ್ಯವಸ್ಥಾಪಕರಾದ ಲತಾಸರಸ್ವತಿ ಹಾಗೂ ನಬಾರ್ಡ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕರಾದ ರೇಣುಕಾ ಶಿವಕುಮಾರ ರವರು ಮಾತನಾಡಿ ತಮ್ಮ ಸಂಸ್ಥೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ವಿಜ್ಞಾನದ ಮುಖ್ಯಸ್ಥರಾದ ಡಾ. ರಾಜೇಗೌಡರವರು ಮಾತನಾಡಿ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿಡುಗಡೆಗೊಂಡ ತಳಿಗಳನ್ನು ಉಪಯೋಗಿಸುವುದು ಹಾಗೂ ಬಿತ್ತನೆ ಬೀಜಗಳ ಮಾರಟ ಕೇಂದ್ರಗಳಾದ ರಾಷ್ಟ್ರೀಯ ಬೀಜ ಯೋಜನೆ, ರಾಷ್ಟ್ರೀಯ ಬೀಜ ನಿಗಮ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯಗಳಿಂದ ಖರೀದಿಸಲು ಸಲಹೆ ನೀಡಿದರು. ಮುಂದುವರೆದು, ರೈತರು ಬಿತ್ತನೆಗೆ ಮೊದಲು ಬೀಜೋಪಚಾರವನ್ನು ಮಾಡಬೇಕು ಎಂದು ತಿಳಿಸಿದರು.
ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ. ಶಿವಶಂಕರ್ ಎಂ. ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ವಿವರಣೆಯನ್ನು ನೀಡಿದರು.
ಕೇಂದ್ರದ ಬೆಳೆ ಶರೀರ ಕ್ರಿಯಾಶಾಸ್ತ್ರದ ವಿಜ್ಞಾನಿಯಾದ ಡಾ. ಪಲ್ಲವಿ ಎನ್. ರವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡುವುದರ ಜೊತೆಗೆ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಮುಂದುವರೆದು ಕಾರ್ಯಕ್ರಮದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಮೋದ್ ಜಿ, ಸಹಾಯಕ ಪ್ರಾಧ್ಯಪಕರು, ಬೇಸಾಯಶಾಸ್ತ್ರ, ಕೃಷಿ ಮಹಾವಿದ್ಯಾಲಯ ಹಾಸನಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ನಾಗರಾಜ ಟಿ ಮತ್ತು ಡಾ. ಶ್ರೀನಿವಾಸ ದೇಶಪಾಂಡೆ ರವರು ತಾಂತ್ರಿಕ ಮಾಹಿತಿ ನೀಡುವುದರ ಜೊತೆಗೆ ರೈತರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ವಿವಿಧ ಇಲಾಖೆಗಳು, ಖಾಸಗಿ ಕಂಪನಿಗಳು ಹಾಗೂ ಕೃಷಿ ಮಹಾವಿದ್ಯಾಲಯದಿಂದ ಬಿತ್ತನೆ ಬೀಜಗಳು, ರಸಗೊಬ್ಬರ, ಯಂತ್ರೋಪಕರಣ ಮತ್ತು ಕೀಟನಾಶಕಗಳ ವಸ್ತುಪ್ರದರ್ಶನ ಮಳಿಗೆಗಳನ್ನು ಏರ್ಪಡಿಸಲಾಗಿತ್ತು.
ಜಿಲ್ಲೆಯ ಹಲವು ಭಾಗಗಳಿಂದ ರೈತ ಹಾಗೂ ರೈತ ಮಹಿಳೆಯರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯುವುದರ ಜೊತೆಗೆ ಕೃಷಿ ಪರಿಕರಗಳನ್ನು ಖರೀದಿ ಮಾಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದ ಮುಖ್ಯಸ್ಥರಾದ ಡಾ. ನಟರಾಜ ಎಸ್. ಕೆ. ಆಲೂರು ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ . ಕೇಶವ್, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿಯಾದ ಕು. ನಿಶ್ಚಿತಾ, ಕೃಷಿ ಸಂಶೋಧನಾ ಕೇಂದ್ರ, ಗುಂಜೇವು, ಮಡೆನೂರು ಮತ್ತು ಅರಸಿಕೆರೆಯ ಮುಖ್ಯಸ್ಥರಾದ ಡಾ. ನಾಗರಾಜ, ಎಂ. ಎಸ್., ಡಾ. ಯೋಗೇಶ್ ಮತ್ತು ಡಾ. ಸೋಮಶೇಖರ್, ಜೈವಿಕ ಇಂಧನ ಉದ್ಯಾನದ ಮುಖ್ಯಸ್ಥರಾದ ಡಾ. ಗಿರೀಶ್, ಎ. ಸಿ., ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮದ ಮುಖ್ಯಸ್ಥರಾದ ಮಧುಸೂಧನ್, ದೂರದರ್ಶನ, ಚಂದನ ವಾಹಿನಿಯ ಮೋಹನ್ ಕೃಷ್ಣ ಹಾಗೂ ಜಿಲ್ಲೆಯ ಹಲವು ಭಾಗಗಳಿಂದ 620 ರೈತರು ಹಾಜರಿದ್ದರು.





